ಕಾಸರಗೋಡು: ತುಳುನಾಡಿನ ಹೊಸ ವರ್ಷಾಚರಣೆಯ ಸಂಭ್ರಮ ವಿಷು ನಾಳೆ ಆಚರಿಸಲ್ಪಡುತ್ತಿದೆ. ತುಳುನಾಡಿನ ಆಚರಣೆ, ನಂಬಿಕೆಗಳು ಪ್ರಕೃತಿಯೊಂದಿಗೆ ಸಂಬಂಧವನ್ನು ಹೊಂದಿ ಮಣ್ಣು, ಋತು, ಜೀವನ ಕ್ರಮಗಳ ಚಕ್ರವಾಗಿ ಸದಾಶಯದ ಊದ್ರ್ವತೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬದುಕು ಮತ್ತು ಪರಿಸರದ ಸಂಬಂಧಗಳು ಹೆಚ್ಚು ಕುತೂಹಲಕರವಾಗಿ ಆಕರ್ಷಿಸುತ್ತದೆ. ಬಿಸಿಲಿನ ಝಳ ಜನಸಾಮಾನ್ಯರನ್ನು ಅಸ್ವಸ್ಥರನ್ನಾಗಿಸುತ್ತಿದ್ದರೆ ಇನ್ನೊಂದೆಡೆ ರಸ್ತೆ ಬದಿಯಲ್ಲಿ ಬಾನೆತ್ತರ ಕಡಲ ಗಾಳಿಗೆ ಪಟಪಟನೆ ಆಕರ್ಷಣೀಯ ಬಣ್ಣದೊಂದಿಗೆ ಗೊಂಚಲಾಗಿ ಹಳದಿ ವರ್ಣದಲ್ಲಿ ಅರಳಿ ನಾಡಹಬ್ಬ ವಿಷುವನ್ನು ಸ್ವಾಗತಿಸುವಂತೆ ಸಿದ್ಧಗೊಂಡಿರುವ ಕೊನ್ನೆ(ಕೊಂದೆ) ಹೂ ಮನಸ್ಸಿಗೆ ತಂಪು ನೀಡಲಾರಂಭಿಸಿದೆ.
ಬಿತ್ತನೆಯ ಹಬ್ಬವೆಂದೇ ಪ್ರಸಿದ್ಧಿ ಪಡೆದ ವಿಷು ಹಬ್ಬಕ್ಕೆ ಸಂಭ್ರಮ ತುಂಬುವಂತೆ ಕೊನ್ನೆ ಹೂ ಅರಳಿ ವಿಷು ಸಂಭ್ರಮಕ್ಕೆ ವಣ್ದ ಸ್ವಾಗತ ನೀಡಲು ತಯಾರಾಗಿದೆ. ಬೇಸಿಗೆಯ ಸುಡು ಬಿಸಿಲಿನ ನಡುವೆಯೂ ಮರದ ರೆಂಬೆಗಳಲ್ಲಿ ಕೊನ್ನೆ ಹೂ ಆರಳಿದ್ದು ಉಲ್ಲಾಸವನ್ನು ತಂದಿದೆ. ಓಣಂ ಕೊಯ್ಲಿನ ಹಬ್ಬ ವಾದರೆ, ವಿಷು ಬಿತ್ತನೆಯ ಹಬ್ಬ ಎಂಬುದು ಹಿಂದಿನ ಪರಂಪರಾಗತ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯ. ಹಿಂದೆ ವಿಷು ಹಬ್ಬ ಸಮೀಪಿಸುವ ಸಂದರ್ಭದಲ್ಲಿ ಮನೆಯ ಸುತ್ತ ಸಣ್ಣ ಮಣ್ಣಿನ ಸಾಲು ತೋಡಿಕೊಂಡು ಬೀಜ ಬಿತ್ತುವ ಮೂಲಕ ಕೃಷಿ ಆರಂಭ ನಡೆಯುತ್ತಿತ್ತು. ಪ್ರಸ್ತುತ ಮಣ್ಣು ಮತ್ತು ಮನುಷ್ಯನ ನಡುವಿನ ಸಂಬಂಧ ದಿನದಿಂದ ದಿನಕ್ಕೆ ದೂರವಾಗುತ್ತಿರುವ ಸಂದರ್ಭದಲ್ಲೂ ಗ್ರಾಮೀಣ ವಾತಾವರಣ ಇಲ್ಲದಾ ಗುತ್ತಿದೆ. ಕೇರಳೀಯ ಸಂಸ್ಕೃತಿಯಿಂದ ಮಲೆಯಾಳಿಗರು ದೂರ ಉಳಿಯುತ್ತಿರುವಂತೆಯೇ ನಾವು ವಿಷುವಿನ ಸಮದ್ಧಿಯ ಹಿರಿಮೆಯನ್ನು ಇಂದಿನ ತಲೆಮಾರು ಮೆರಯುತ್ತಿದೆ. ಇದಕ್ಕೆ ಹಬ್ಬದ ಆಚರಣೆಯ ಶೈಲಿಯಲ್ಲಿ ಬದಲಾವಣೆಕಂಡಿರುವುದೂ ಇದಕ್ಕೆ ಕಾರಣವಾಗಿದೆ.
ಮಲೆಯಾಳದಲ್ಲಿ ಕಣಿಕೊನ್ನ ಎಂದು ಕರೆಯುವ ಕಕ್ಕೆಹೂ ದೊಡ್ಡ ಐತಿಹಾಸವನ್ನೇ ಹೊಂದಿದೆ. ಭೂಮಿಗೆ ಆಗಮಿಸಿದ ಐಶ್ವರ್ಯ ದೇವತೆಯಾದ ಲಕ್ಷ್ಮೀದೇವಿ ಮೀನ ಮಾಸದ ಬಿಸಿಲಿನ ಝಳದಲ್ಲಿ ದಣಿದು ಒಂದು ಮರದ ನೆರಳಲ್ಲಿ ಕುಳಿತುಕೊಂಡು, ವಿಶ್ರಾಂತಿ ಪಡೆದುಕೊಂಡಿದ್ದಳು. ತನಗೆ ವಿಶ್ರಾಂತಿಗಾಗಿ ನೆರಳು ನೀಡಿದ ಮರವನ್ನು ದೇವಿ ಮುಟ್ಟಿದಾಗ ತಕ್ಷಣ ಹೂಗಳು ಆರಳಿರುವುದಾಗಿ, ಅದರಂತೆ ಕಡು ಬಿಸಿಲಲ್ಲೂ ಕಕ್ಕೆ ಹೂ ಬಿಟ್ಟು ಸುಂದರವಾಗಿರುವುದು ಎಂಬುದು ಐತಿಹ್ಯ. ಆದರಿಂದಲೇ ಕೇರಳಿಯರ ವರ್ಷ ಆರಂಭವಾಗುವುದು ಐಶ್ವರ್ಯದ ಪ್ರತೀತಿಯಾದ ವಿಷು ಹಬ್ಬದಂದು. ಅದಕ್ಕಾಗಿಯೇ ಐಶ್ವರ್ಯದ ದ್ಯೋತಕವಾಗಿ ಕೊನ್ನೆ ಹೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ಕೊಂದೆ (ಕಕ್ಕೆ, ಸ್ವರ್ಣಪುಷ್ಪ) ಎಂಬ ಹೆಸರಿನಿಂದ ಕರೆಯಲ್ಪಡುವ ಈ ಹೂವು ಮಾರ್ಚ್-ಮೇ ತಿಂಗಳಲ್ಲಿ ಕಾಣಸಿಗುತ್ತದೆ. ಇದು ಹಳದಿ ಬಣ್ಣದ ಹೂವನ್ನು ಗೊಂಚಲು ಗೊಂಚಲಾಗಿ ಮರ ತುಂಬಾ ಬಿಟ್ಟು ಅತ್ಯಂತ ಸುಂದರವಾಗಿ ಕಾಣುತ್ತದೆ. ಇದು ಧ್ಯಾಲ್ಯಾಂಡ್ ದೇಶದ ರಾಷ್ಟ್ರೀಯಪುಷ್ಪವಾದರೆ, ಕೇರಳ ರಾಜ್ಯದ ರಾಜ್ಯಪುಷ್ಪವಾಗಿದೆ. ವಿಷು ಹಬ್ಬಕ್ಕೆ ಸಂಭ್ರಮ ತುಂಬುವಂತೆ ಕೊನ್ನೆ ಹೂ(ಕಕ್ಕೆ ಹೂ) ಎಲ್ಲೆಡೆ ಅರಳಿ ನಿಂತಿದ್ದು, ಅಗಸದಲ್ಲಿ ನಕ್ಷತ್ರಗಳು ಶೋಭಿಸುವಂತೆ ಮರದ ಕೊಂಬೆಗಳಲ್ಲಿ ಮಿನುಗಲಾರಂಭಿಸಿವೆ. ಶಿವನಿಗೆ ಪ್ರಿಯವಾದ ಈ ಹೂವನ್ನು ನಿತ್ಯ ದೇವರಿಗೆ ಅರ್ಪಿಸದೇ ಇದ್ದರೂ ಕೊನ್ನೆ ಹೂ ವಿಷು ದಿನದಂದು ಅರ್ಪಿಸುವುದು ವಿಶೇಷತೆಯಾಗಿದೆ.
(ಚಿತ್ರದಲ್ಲಿ ಕಾಸರಗೋಡು ಅಡ್ಕತ್ತಬೈಲು ಶ್ರಿಸುಬ್ರಹ್ಮಣ್ಯ ದೇವಾಲಯ ಪರಿಸರದಲ್ಲಿ ಕಂಡುಬಂದಿರುವ ಅರಳಿ ನಿಂತ ಕೊನ್ನೆ ಹೂ.)