ರಾಷ್ಟ್ರ ಪರಮ ವೈಭವಕ್ಕೆ ಸನ್ನದ್ದವಾಗಿದೆ-ಜಗದೀಶ ಪ್ರತಾಪನಗರ - ಮುಂಡೋಡು ಒತ್ತೆಕೋಲ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಅಭಿಮತ
0
ಏಪ್ರಿಲ್ 03, 2019
ಬದಿಯಡ್ಕ: ಭಾರತೀಯ ಸಂಸ್ಕøತಿ, ಜೀವನ ಪದ್ದತಿಯ ಹಿರಿಮೆ ಜಾಗತಿಕ ಗುರುವಾಗುವಲ್ಲಿ ಬೆನ್ನೆಲುಬಾಗಿದೆ. ಈ ನಿಟ್ಟಿನಲ್ಲಿ ಅಂತಹ ಸಂಸ್ಕøತಿಯನ್ನು ಮುನ್ನಡೆಸುವಲ್ಲಿ ಯುವ ಸಮೂಹ ಕಾರ್ಯಪ್ರವೃತ್ತರಾಗುವಲ್ಲಿ ವಹಿಸುವ ಶ್ರದ್ದೆಗೆ ಬೆಂಬಲ ನೀಡಲು ಇಲ್ಲಿಯ ವೈವಿಧ್ಯ ಆರಾಧನೆ, ಆಚರಣೆಗಳು ಪ್ರಧಾನ ಪಾತ್ರವಹಿಸುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಜಗದೀಶಪ್ರತಾಪನಗರ ಅವರು ತಿಳಿಸಿದರು.
ಮಾನ್ಯ ಸಮೀಪದ ಮುಂಡೋಡು ಶ್ರೀವಿಷ್ಣುಮೂರ್ತಿ ಸೇವಾ ಸಮಿತಿ ಆಶ್ರಯದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಒತ್ತೆಕೋಲ ಯಾ ಕೆಂಡಸೇವೆಯ ಅಂಗವಾಗಿ ಸ್ಥಳೀಯ ಶ್ರೀಮೂಕಾಂಬಿಕಾ ಆಟ್ರ್ಸ್ ಮತ್ತು ಸ್ಪೋರ್ಟ್ ಕ್ಲಬ್ ತನ್ನ 33ನೇ ವಾರ್ಷಿಕ ಉತ್ಸವದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸಗೈದು ಅವರು ಮಾತನಾಡಿದರು.
ಸನಾತನ ಸಂಸ್ಕøತಿಯ ಬೇರುಗಳು ಇಲ್ಲಿಯ ಆಚರಣೆ, ಆರಾಧನಾ ಕ್ರಮಗಳಲ್ಲಿ ನಿಕ್ಷಿಪ್ತವಾಗಿದ್ದು, ಧರ್ಮಾಚರಣೆಯ ಪಾಲನೆಯ ಮೂಲಕ ಬದುಕಿನ ಸಾರ್ಥಕ್ಯವನ್ನು ಕಂಡುಕೊಳ್ಳಲಾಗುತ್ತಿದೆ. ರಾಷ್ಟ್ರದ ಪರಮ ವೈಭವದ ಸ್ಥಾಪನೆಗೆ ಪ್ರಸ್ತುತ ಕಾಲಘಟ್ಟ ಸರ್ವ ಸನ್ನದ್ದವಾಗಿದ್ದು, ಭರತ ಖಂಡದ ಜನಮಾನಸದಲ್ಲಿ ಭರವಸೆಯ ಧೀಶಕ್ತಿ ಮೈಗೂಡಲಿ ಎಂದು ಅವರು ತಿಳಿಸಿದರು. ರಾಕ್ಷಸೀಯ ದಾಷ್ಟ್ರೆದ ವಿರುದ್ದ ವಿಜಯಗಳಿಸಿದ ಶ್ರೀವಿಷ್ಣುಮೂರ್ತಿ ದೈವ ಪರಿಕಲ್ಪನೆಯ ಮೂಲತತ್ವವನ್ನು ಗ್ರಹಿಸುವ ಮೂಲಕ ದೈವ ದೇವರುಗಳ ನಂಬಿಕೆಯನ್ನು ಬಲಗೊಳಿಸಿ ರಾಷ್ಟ್ರ,ಸಮಾಜ, ವ್ಯಕ್ತಿ ಬದಲಾವಣೆಯೊಂದಿಗೆ ಶಾಂತ ಸುಸ್ಥಿರತೆ ನೆಲಗೊಳ್ಳುವುದು ಎಂದು ಅವರು ಈ ಸಂದರ್ಭ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳೂರಿನ ಖ್ಯಾತ ವೈದ್ಯ ಡಾ.ಭರತ್ ಕುಮಾರ್ ಮುಂಡೋಡು ಅಧ್ಯಕ್ಷತೆ ವಹಿಸಿದ್ದ ಸಮಾರಂಭವನ್ನು ಭಾರತೀಯ ಮಜ್ದೂರ್ ಸಂಘದ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಮುರಳೀಧರನ್ ಉದ್ಘಾಟಿಸಿದರು. ಬದಿಯಡ್ಕ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ವೇಣುಗೋಪಾಲ ರಾವ್ ಮುಂಡೋಡು ಉಪಸ್ಥಿತರಿದ್ದು ಶುಭಹಾರೈಸಿದರು. ಸಮಾರಂಭದಲ್ಲಿ ಶ್ರೀವಿಷ್ಣುಮೂರ್ತಿ ಸೇವಾ ಸಮಿತಿ ಮುಂಡೋಡು ಇದರ ಅಧ್ಯಕ್ಷ ಭಾಸ್ಕರ ಮುಂಡೋಡು, ನಿವೃತ್ತ ಸೇನಾ ಸುಬೈದಾರ್ ಈಶ್ವರ ಭಟ್ ಕಾಕುಂಜೆ, ಸಮಾಜ ಸೇವಕಿ ಸಾವಿತ್ರಿ ಎನ್.ರಾವ್ ಮುಂಡೋಡು, ಹಿರಿಯ ಯಕ್ಷಗಾನ ಕಲಾವಿದ ಈಶ್ವರ ರಾವ್ ಮುಂಡೋಡು, ಭಜನಾ ಸಾಹಿತಿ ಪರಮೇಶ್ವರ ನಾಯ್ಕ ಅರ್ತಲೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮೂಕಾಂಬಿಕಾ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ನ ಅಧ್ಯಕ್ಷ ಪದ್ಮನಾಭ ರಾವ್ ಸ್ವಾಗತಿಸಿ, ಜೊತೆಕಾರ್ಯದರ್ಶಿ ಸಂತೋಷ್ ಕುಮಾರ್ ವಂದಿಸಿದರು. ಚಂದ್ರಹಾಸ ಮಾಸ್ತರ್ ಪಿ.ಎಂ.ಮುಂಡೋಡು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಸೋಮವಾರ ಬೆಳಿಗ್ಗೆ 9ಕ್ಕೆ ಮುಂಡೋಡು ಶ್ರೀಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ಪ್ರಾರ್ಥನೆ, ಮೇಲರಿ ಕೂಡಿಸುವುದು ನೆರವೇರಿತು. ಸಂಜೆ 6ಕ್ಕೆ ಮುಂಡೋಡು ತರವಾಡು ಭಂಡಾರ ಮನೆಯಿಂದ ಶ್ರೀದೈವದ ಭಂಡಾರ ಆಗಮನ, ರಾತ್ರಿ 8ಕ್ಕೆ ತೊಡಂಙಲ್, ಮೇಲೇರಿಗೆ ಅಗ್ನಿ ಸ್ಪರ್ಷ ನಡೆಯಿತು. ರಾತ್ರಿ 11 ರಿಂದಶ್ರೀದೈವದ ಕುಳಿಚ್ಚಾಟ, ಮಂಗಳವಾರ ಮುಂಜಾನೆ 4ಕ್ಕೆ ಶ್ರೀವಿಷ್ಣುಮೂರ್ತಿ ದೈವದ ಕೆಂಡಸೇವೆ ಮತ್ತು ಪ್ರಸಾದ ವಿತರಣೆ ನಡೆಯಿತು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 12.30 ರಿಂದ ಪ್ರಸಿದ್ದ ಗಾಯಕ ಡಾ.ಕಿರಣ್ ಕುಮಾರ್ ಪುತ್ತೂರು ಅವರ ಗಾನಸಿರಿ ತಂಡದವರಿಂದ ಸುಮಧುರ ಗೀತಾಂಜಲಿ ಭಕ್ತಿ-ಭಾವ-ಜಾನಪದ ಗೀತೆಗಳ ಪ್ರಸ್ತುತಿ ನಡೆಯಿತು.