ಬದಿಯಡ್ಕ: ಕವಿಯಾದವನಿಗೆ ಓದುವಿಕೆ ಮತ್ತು ಆಲಿಸುವಿಕೆ ಕವಿತ್ವ ಸಿದ್ದಿಸಲು ನೆರವಾಗುತ್ತದೆ. ಅನುಭವ ಜನ್ಯವಾದ ಬರಹಗಳಿಂದ ಸಾಹಿತ್ಯದ ಗುಣಮಟ್ಟ ಶ್ರೀಮಂತಗೊಂಡು ಕವಿ ಜನಮಾನಸದಲ್ಲಿ ನೆಲೆಗೊಳ್ಳುತ್ತಾನೆ ಎಂದು ಯುವ ಕವಿ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರು ತಿಳಿಸಿದರು.
ಕುಂಬಳೆಯ ಸಿಂಪರ ಪ್ರಕಾಶನವು ಭಾನುವಾರ ಬದಿಯಡ್ಕದ ರಾಮಲೀಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಥೆಗಾರ್ತಿ, ಶಿಕ್ಷಕಿ ಪರಿಣಿತ ರವಿ ಎಡನಾಡು ಅವರ ಚೊಚ್ಚಲ ಎರಡು ಕೃತಿಗಳ ಅನಾವರಣ ಸಮಾರಂಭದ ಅಂಗವಾಗಿ ಅಪರಾಹ್ನ ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಹಿತ್ಯ ರಚನೆ, ಕವಿತ್ವವು ತಪಸ್ಸಿನಂತಹ ಸಾಧನೆಯಾಗಿದ್ದು, ಸ್ವ-ಪ್ರಶಂಸನೆಯ ತೆವಲಿಗೆ ಅದು ಸಿದ್ದಿಸುವುದಿಲ್ಲ. ಪ್ರಸ್ತುತ ಕಾಲಘಟ್ಟದಲ್ಲಿ ಯುವ ಬರಹಗಾರರು ಪ್ರಚಾರದ ತೆವಲಿಗೊಳಗಾಗಿರುವುದು ದುರ್ದೈವ ಎಂದು ಅವರು ವಿಶಾದ ವ್ಯಕ್ತಪಡಿಸಿದರು. ಪರಸ್ಪರ ಪ್ರೀತಿಸುವ, ಹೊಸತನ್ನು ಸ್ವೀಕರಿಸುವ ವಿಶಾಲ ಹೃದಯ ಶ್ರೀಮಂತಿಕೆ ಕವಿತ್ವ ಸಿದ್ದಿಸುವಲ್ಲಿ ನೆರವಾಗುತ್ತದೆ. ಭಾಷೆ, ಅದರ ಚೌಕಟ್ಟುಗಳಿಗೆ ನ್ಯಾಯ ಒದಗಿಸುವುದರ ಜೊತೆಗೆ ವರ್ತಮಾನದಲ್ಲಿ ನಿಂತು, ಭೂತ-ಭವಿಷ್ಯಗಳನ್ನು ಗ್ರಹಿಸುವ ಚಾಕಚಕ್ಯತೆಯನ್ನು ಅಳವಡಿಸಿರಬೇಕು ಎಂದು ತಿಳಿಸಿದರು.
ಹಿರಿಯ ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ ಅವರು ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿ, ತಲ್ಲಣ, ನೋವು, ಗೊಂದಲ, ಸಂತೋಷಗಳ ಅಭಿವ್ಯಕ್ತಿಯು ಅಕ್ಷರ ರೂಪದಲ್ಲಿ ಆಕೃತಿಗೊಂಡಾಗ ಕಾವ್ಯ ಸೃಷ್ಟಿಯಾಗುತ್ತದೆ. ಅದು ಏಕಾಂತದ ಸುತ್ತಾಟವಾಗಿದೆ ಎಂದು ತಿಳಿಸಿದರು. ಬದುಕು, ಸಮಾಜಗಳನ್ನು ಮೂಲ ದ್ರವ್ಯವಾಗಿಸಿ ಶೋಧಿಸಿದಾದ ಸೃಜನಾತ್ಮಕ ಕಾವ್ಯ ಹುಟ್ಟಿಕೊಂಡು ಜನಮನವನ್ನು ತಟ್ಟುತ್ತದೆ ಎಂದು ಅವರು ಈ ಸಂದರ್ಭ ತಿಳಿಸಿದರು. ಸೂಕ್ಷ್ಮ ಪ್ರಜ್ಞೆಯ ಕವಿ ಅಲ್ಪ ತೃಪ್ತನಾಗಿರಬೇಕು. ಸಂತೃಪ್ತತೆಯಿಂದ ಕಾವ್ಯ ಸೃಷ್ಟಿಯು ಅಸಾಧ್ಯವಾಗಿದ್ದು, ಕಾಲಧರ್ಮಕ್ಕನುಸರಿಸಿ ತಾನು ನೋವುಂಡು ಇತರರಿಗೆ ಅಮೃತ ಸದೃಶ ಅಕ್ಷರ ಪೋಣಿಸುವಿಕೆಯ ಕಾವ್ಯಾಂಜಲಿಯನ್ನು ಹಪಹಪಿಸುವಿಕೆಯು ಕವಿಯನ್ನು ಗುರುವಾಗಿಸುತ್ತದೆ ಎಂದು ತಿಳಿಸಿದರು.
ಬಳಿಕ ನಡೆದ ಕವಿಗೋಷ್ಠಿಯಲ್ಲಿ ಪ್ರೇಮಾ ಉದಯಕುಮಾರ್ ಸುಳ್ಯ, ಪ್ರಮೀಳಾ ರಾಜ್ ಸುಳ್ಯ, ಅಶ್ವಿನಿ ಕೋಡಿಬೈಲು, ಶ್ವೇತಾ ಕಜೆ, ವಿದ್ಯಾ ಗಣೇಶ್ ಅಣಂಗೂರು, ಶ್ಯಾಮಲಾ ರವಿರಾಜ್ ಕುಂಬಳೆ, ಲತಾ ಆಚಾರ್ಯ ಬನಾರಿ, ನಾರಾಯಣ ಭಟ್ ಹಿಳ್ಳೆಮನೆ, ಬಿ.ಕೆ.ರಾಜ್ ನಂದಾವರ, ರಾಘವೇಂದ್ರ ಕಾರಂತ್, ಶಶಿಕಲಾ ಕುಂಬಳೆ, ಸುಭಾಷ್ ಪೆರ್ಲ, ಪುರುಷೋತ್ತಮ ಭಟ್ ಕೆ, ಮಣಿರಾಜ್ ಓಂತಿಚ್ಚಾಲ್, ದಯಾನಂದ ರೈ ಕಳ್ವಾಜೆ, ಸುಶೀಲಾ ಪದ್ಯಾಣ, ಜ್ಯೋಸ್ನ್ಸಾ ಎಂ.ಕಡಂದೇಲು, ಪ್ರಭಾವತಿ ಕೆದಿಲಾಯ ಪುಂಡೂರು ಸ್ವರಚಿತ ಕವನಗಳನ್ನು ವಾಚಿಸಿದರು. ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಉಪನ್ಯಾಸಕ ಡಾ.ರತ್ನಾಕರ ಮಲ್ಲಮೂಲೆ, ಕೃತಿಕರ್ತೆ ಪರಿಣಿತ ರವಿ ಎಡನಾಡು, ಸಿಂಪರ ಪ್ರಕಾಶನದ ರವೀಂದ್ರನಾಥ ಹೊಳ್ಳ, ಚೇತನಾ ಕುಂಬಳೆ, ಲಕ್ಷ್ಮಣ ಪ್ರಭು ಕರಿಂಬಿಲ ಮೊದಲಾದವರು ಉಪಸ್ಥಿತರಿದ್ದರು.
ಶೈಲಜಾ ರಾಮಚಂದ್ರ ಹೊಳ್ಳ ಸ್ವಾಗತಿಸಿ, ಕಾರ್ತಿಕ್ ಶಾಸ್ತ್ರಿ ವಂದಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.