ಬದಿಯಡ್ಕ: ಕಾಸರಗೋಡು ಹೊಸದುರ್ಗ ಹೈವಬ್ರಾಹ್ಮಣ ಸಭಾದ ನೇತೃತ್ವದಲ್ಲಿ ಕಳೆದ ಹಲವಾರು ವರ್ಷಗಳಿಂದ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ನಡೆದು ಬರುತ್ತಿರುವ ವಸಂತ ವೇದಪಾಠ ಶಿಬಿರವು ಭಾನುವಾರ ಆರಂಭವಾಯಿತು.
ನಿವೃತ್ತ ಬಿಎಸ್‍ಎನ್‍ಎಲ್ ಅಧಿಕಾರಿ ಗೋವಿಂದ ಭಟ್ ಎಡನೀರು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸನಾತನ ಸಂಸ್ಕøತಿಯನ್ನು ಪಸರಿಸುವ ನಿಟ್ಟಿನಲ್ಲಿ ವೇದಮಂತ್ರಗಳು ಪ್ರಾಮುಖ್ಯತೆಯನ್ನು ಹೊಂದಿದೆ. ಮುಂದಿನ ಜನಾಂಗವು ವೇದ, ಸಂಸ್ಕøತಗಳತ್ತ ಒಲವನ್ನು ಹೊಂದಲು ಇಂತಹ ಶಿಬಿರಗಳು ಸಹಕಾರಿಯಾಗಿವೆ ಎಂದರು.
ಕಾಸರಗೋಡು ಹೊಸದುರ್ಗ ಹೈವಬ್ರಾಹ್ಮಣ ಸಭಾದ ಅಧ್ಯಕ್ಷ ಕುಳಮರ್ವ ಶಂಕರನಾರಾಯಣ ಭಟ್ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಮೂರ್ತಿ ಶಿವರಾಮ ಭಟ್ ಪೆರಡಾಲ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೈ.ಕೆ.ಗೋವಿಂದ ಭಟ್ ಶುಭಾಶಂಸನೆಗೈದರು. ಶ್ಯಾಮಪ್ರಸಾದ ಕಬೆಕ್ಕೋಡು ನಿರೂಪಿಸಿದರು. ವೇದ ಅಧ್ಯಾಪಕರುಗಳಾದ ಮಹಾಗಣಪತಿ ಅಳಕ್ಕೆ ಸ್ವಾಗತಿಸಿ, ಮಧುಶಂಕರ ಭಟ್ ವಂದಿಸಿದರು. ಉಪನೀತರಾದ ಯಜುರ್ವೇದ ವಟುಗಳು ಶಿಬಿರದ ಪ್ರಯೋಜನವನ್ನು ಪಡೆಯಬಹುದಾಗಿದೆ.