ಕಾಸರಗೋಡು: ಲೋಕಸಭಾ ಚುನಾವಣೆ ಮಂಗಳವಾರ ನಡೆದ ವೇಳೆ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ಅಂಗವಿಕಲ ಮತದಾತರನ್ನು ಮತಗಟ್ಟಗಳಿಗೆ ತಲಪಿಸುವಲ್ಲಿ ಎನ್.ಎಸ್.ಎಸ್. ಸ್ವಯಂಸೇವಕರು ಮತ್ತು ಅಂಗನವಾಡಿ ಸಿಬ್ಬಂದಿ ಗಣನೀಯ ಸೇವೆ ಸಲ್ಲಿಸಿದ್ದಾರೆ.
ಜಿಲ್ಲೆಯ 19 ಶಾಲೆಗಳ ಸುಮಾರು ನೂರು ಮಂದಿ ಪ್ಲಸ್ ವನ್ ವಿದ್ಯಾರ್ಥಿಗಳಾಗಿರುವ ಎನ್.ಎಸ್.ಎಸ್. ಸ್ವಯಂಸೇವಕರು, 850 ಮಂದಿ ಅಂಗನವಾಡಿ ಸ್ವಯಂಸೇವಕರು ಅಂಗವಿಕಲ ಮತದಾರರನ್ನು ಮತಗಟ್ಟೆಗಳಿಗೆ ತಲಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂಗವಿಕಲರ ನೋಡೆಲ್ ಅಧಿಕಾರಿ ಪಿ.ಬಿಜು ಅವರ ನೇತೃತ್ವದಲ್ಲಿ ಜಿಲ್ಲೆಯ 5 ವಿಧಾನಸಭೆಗಳ 12 ಸಂಚಾಲಕರು ಈ ಚಟುವಟಿಕೆಗಳ ಏಕೀಕರಣ ನಡೆಸಿದರು.
ವಿಧಾನಸಭಾ ಕ್ಷೇತ್ರ ಮಟ್ಟದ ಸಂಚಾಲಕರು ಎ.ಆರ್.ಒ.ಗಳ ನಿಯಂತ್ರಣ ಕೊಠಡಿಗಳ ಮೂಲಕ ಚಟುವಟಿಕೆಗಳ ನೇತೃತ್ವ ವಹಿಸಿದ್ದರು. ಇವರ ವ್ಯಾಪ್ತಿಯಲ್ಲಿರುವ 84 ಸೆಕ್ಟರ್ ಸಂಚಾಲಕರು ಗ್ರಾಮ ವ್ಯಾಪ್ತಿಯಲ್ಲಿ ಚಟುವಟಿಕೆಗಳನ್ನು ಏಕೀಕರಿಸಿದ್ದರು. ಅಂಗನವಾಡಿ ಸಿಬ್ಬಂದಿ, ಎನ್.ಎಸ್.ಎಸ್. ಸ್ವಯಂಸೇವಕರು ಮನೆಗಳಿಗೆ ಆಗಮಿಸಿ ಅಂಗವಿಕಲ ಮತದಾರರನ್ನು ಆ್ಯಂಬುಲೆನ್ಸ್ ಮೂಲಕ ಆಯಾ ಕೇಂದ್ರಗಳಿಗೆ ತಲಪಿಸಿದ್ದರು. ಅಲ್ಲಿಂದ ಮತ್ತೊಂದು ಆ್ಯಂಬುಲೆನ್ಸ್ ಮೂಲಕ ಮತಗಟ್ಟೆಗಳಿಗೆ ತಲಪಿಸಿದ್ದರು.
ಅಂಗವಿಕಲ ಮತದಾರರನ್ನು ಮತಗಟ್ಟೆಗಳಿಗೆ ತಲಪಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ 25 ಆ್ಯಂಬುಲೆನ್ಸ್ ಗಳ ಸೇವೆ ಒದಗಿಸಲಾಗಿತ್ತು. ಬಹುತೇಕ ಅಂಗವಿಕಲರನ್ನು ಮನೆಗಳಿಂದ ಎರಡೂ ಕೈಗಳಿಂದ ಎತ್ತಿಕೊಂಡು ಆ್ಯಂಬುಲೆನ್ಸ್‍ಗೆ ತಲಪಿಸಲಾಗಿತ್ತು.