ಉಪ್ಪಳ: ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ವಿದ್ಯಾಪೀಠದ ಆಡಳಿತ ಮಂಡಳಿ, ಅಧ್ಯಾಪಕ ವೃಂದ, ರಕ್ಷಕ ವೃಂದ ಹಾಗೂ ಇತರ ಶಾಲಾ ಸಿಬಂದಿವರ್ಗ ಮತ್ತು ಕುಟುಂಬದವರು ಒಂದಾಗಿ ಪರಸ್ಪರ ಬಾಂಧವ್ಯವನ್ನು ಸಾರುವ ವಿಶಿಷ್ಟವಾದ ಕಾರ್ಯಕ್ರಮ ಕುಟುಂಬ ಸಂಗಮ 2018-19 ಶನಿವಾರ ನಡೆಯಿತು. ಉದ್ಘಾಟನಾ ಸಮಾರಂಭದ ದಿವ್ಯ ಉಪಸ್ಥಿತಿಯನ್ನು ವಹಿಸಿದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತು ಸುಸಮೃದ್ಧ, ಬಲಿಷ್ಟ ಹಾಗೂ ಸುಸಂಸ್ಕೃತ ಕುಟುಂಬವು ಸಮಾಜದಲ್ಲಿ ಶಾಂತಿ-ಸಹಬಾಳ್ವೆಯನ್ನು ಸ್ಥಾಪಿಸುವಲ್ಲಿ ವಿಶೇಷ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ನಡೆಸಲಾಗುತ್ತಿರುವ ಈ ಕಾರ್ಯಕ್ರಮವು ಯಶಸ್ವಿಯಾಗಲಿ ಎಂದು ಹರಸಿ ಆಶೀರ್ವಚನವಿತ್ತರು.
ಶಾಲಾ ಆಡಳಿತ ಸಮಿತಿಯ ಅಧ್ಯಕ್ಷ ರಾಮಚಂದ್ರ ಚೆರುಗೋಳಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಶಾಲಾ ಕ್ಷೇಮ ಸಮಿತಿಯ ಉಪಾಧ್ಯಕ್ಷ ಉದಯಕುಮಾರ್, ಮಾತೃಸಮಿತಿಯ ಅಧ್ಯಕ್ಷೆ ಆಶಾ ಜಯಪ್ರಕಾಶ್, ಶಿಶುವಾಟಿಕಾ ಸಮಿತಿಯ ಅಧ್ಯಕ್ಷೆ ತುಳಸಿ ಹಾಗೂ ಶಾಲಾ ಮುಖ್ಯಶಿಕ್ಷಕಿ ವಾರಿಜಾ ಉಪಸ್ಥಿತರಿದ್ದರು. ಶಿಕ್ಷಕಿ ಮಮತಾ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಶಿಕ್ಷಕಿ ಕುಮಾರಿ ನಶ್ಮಿತಾ ನಿರೂಪಿಸಿದರು. ಶಿಕ್ಷಕಿಯರಾದ ರೇಖಾ ಪ್ರದೀಪ್ ಸ್ವಾಗತಿಸಿ, ಪ್ರಭಾವತಿ ವಂದಿಸಿದರು.
ಉದ್ಘಾಟನೆಯ ಬಳಿಕ ವಿದ್ಯಾಭಾರತಿಯ ದಕ್ಷಿಣ ಮಧ್ಯ ಕ್ಷೇತ್ರೀಯ (ಆಂದ್ರಪ್ರದೇಶ, ತೆಲಂಗಾಣ, ಕರ್ನಾಟಕ) ಸಂಘಟನಾ ಕಾರ್ಯದರ್ಶಿ ಜಿ. ಆರ್. ಜಗದೀಶ್ ಕುಟುಂಬದ ಮೌಲ್ಯಗಳು ಹಾಗೂ ಅವುಗಳ ರಕ್ಷಣೆಯಲ್ಲಿ ನಮ್ಮ ಪಾತ್ರ ಎಂಬ ವಿಷಯದ ಕುರಿತಾಗಿ ಮಾತನಾಡಿದರು. ಶಾಲಾ ಆಡಳಿತ ಸಮಿತಿಯ ಅಧ್ಯಕ್ಷ ರಾಮಚಂದ್ರ ಚೆರುಗೋಳಿ ಅವರು ಜಿ. ಆರ್. ಜಗದೀಶ್ ಅವರನ್ನು ಶಾಲು ಹೊದೆಸಿ ಸ್ಮರಣಿಕೆಯನ್ನಿತ್ತು ಗೌರವಿಸಿದರು.
ಭೋಜನ ವಿರಾಮದ ಬಳಿಕ ನಡೆದ ಪ್ರತಿಭಾ ಪ್ರದರ್ಶನದಲ್ಲಿ ಕುಟುಂಬ ಸದಸ್ಯರು ತಮ್ಮ ವಿಶಿಷ್ಟಪ್ರತಿಭೆಗಳನ್ನು ಪ್ರಕಟಿಸಿದರು. ಆ ಬಳಿಕ ಸೇವಾಭಾರತಿಯ ಕರ್ನಾಟಕ ರಾಜ್ಯಪ್ರಮುಖರೂ ಶಾಲಾ ಆಡಳಿತ ಸಮಿತಿಯ ಸದಸ್ಯರಾದ ಸುಬ್ರಾಯ ನಂದೋಡಿಯವರು ಶಾಲೆಯ ಅಭಿವೃದ್ಧಿಯಲ್ಲಿ ನಮ್ಮ ಪಾತ್ರ ಎಂಬ ವಿಷಯದ ಕುರಿತಾಗಿ ಕುಟುಂಬ ಸದಸ್ಯರನ್ನೊಳಗೊಂಡ ಗುಂಪು ಚರ್ಚೆಯನ್ನು ನಡೆಸಿಕೊಟ್ಟರು.
ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿಪರಿಷತ್ತಿನ ರಾಷ್ಟ್ರಿಯ ಸಂಘಟನಾ ಸಹ ಕಾರ್ಯದರ್ಶಿ ರಘುನಂದನ್ ಅತಿಥಿಗಳಾಗಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ವಾರಿಜಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿತ್ಯಾನಂದ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಹಾಗೂ ಶಾಲಾ ಆಡಳಿತ ಸಮಿತಿಯ ಸದಸ್ಯ ಮೋಹನದಾಸ್, ಸುಬ್ರಾಯ ನಂದೋಡಿ, ರಾಮಚಂದ್ರ ಚೆರುಗೋಳಿ ಹಾಗೂ ಶಾಲಾ ಆಡಳಿತಾಧಿಕಾರಿ ಕಮಲಾಕ್ಷ ಎಂ ಉಪಸ್ಥಿತರಿದ್ದರು. ಅತಿಥಿಗಳಾಗಿ ಉಪಸ್ಥಿತರಿದ್ದ ರಘುನಂದನ್ ಅವರನ್ನು ಮೋಹನದಾಸ್ ಕೊಂಡೆವೂರು ಶಾಲು ಹೊದೆಸಿ ಸ್ಮರಣಿಕೆಯನ್ನಿತ್ತು ಗೌರವಿಸಿದರು. ಶಿಕ್ಷಕಿ ರೇಶ್ಮಾ ು ನಿರೂಪಿಸಿದ ಕಾರ್ಯಕ್ರಮದಲ್ಲಿ ಸುನೀತಾ ಸ್ವಾಗತಿಸಿ, ಕರಿಶ್ಮಾ ವಂದಿಸಿದರು.