ಸ್ವರ ಮಂಟಮೆಯಲ್ಲಿ ಡಾ.ನೆಗಳಗುಳಿ ಅವರ "ಪಡುಗಡಲ ತೆರಮಿಂಚು"ಗಜಲ್ ಸಂಕಲನ ಅನಾವರಣ ಅರ್ಥ - ಸಂವಾದಗಳ ಮುಖಾಂತರ ವಿಷಯ ಪ್ರತಿಪಾದನೆ ಗಜಲ್ -ಡಾ. ಪೆರ್ಲ
0
ಏಪ್ರಿಲ್ 06, 2019
ಮಂಗಳೂರು: ಬೆರಗು ಕಣ್ಣುಗಳೊಂದಿಗೆ ಪ್ರಪಂಚವನ್ನು ಕಂಡು ಅಕ್ಷರ ರೂಪದಲ್ಲಿ ಸಕಾರಾತ್ಮಕ ಸಮಾಜ ನಿರ್ಮಾಣಕ್ಕಾಗಿ ಪದಪುಂಜಗಳನ್ನು ಕಟ್ಟಿಕೊಡುವ ಕವಿ ಋಷಿ ಸದೃಶ ವ್ಯಕ್ತಿತ್ವದವನು. ಈ ಕಾರಣದಿಂದಲೇ ರವಿಗಿಂತ ಮಿಗಿಲೆನಿಸುವ ಕವಿ ತನ್ನ ಕಾವ್ಯ ಕುಂಚಗಳಿಂದ ಸುಂದರತೆಯನ್ನು ಸೃಷ್ಟಿಸುತ್ತಾನೆ. ಸರ್ವರ ಹಿತವೇ ಸಾಹಿತ್ಯ ಕೃತಿಗಳ ಒಟ್ಟು ಲಕ್ಷ್ಯ ಎಂದು ಸಾಹಿತಿ, ಮಂಗಳೂರು ಬಾನುಲಿ ನಿಲಯದ ನಿವೃತ್ತ ನಿರ್ದೇಶಕ ಡಾ.ವಸಂತಕುಮಾರ್ ಪೆರ್ಲ ಅವರು ಅಭಿಪ್ರಾಯಪಟ್ಟರು.
ಯುಗಾದಿಯ ಪುಣ್ಯದಿನ ಶನಿವಾರ ಬೆಳಿಗ್ಗೆ ಮಂಗಳೂರು ಅಕಾಶವಾಣಿಯ ತುಳುವಿಭಾಗವು ಪ್ರಸ್ತುತಪಡಿಸಿದ ಸ್ವರ ಮಂಟಮೆ 26ನೇ ಸರಣಿ ಕಾರ್ಯಕ್ರಮದಲ್ಲಿ ವೈದ್ಯ, ಸಾಹಿತಿ ಡಾ. ಸುರೇಶ ನೆಗಳಗುಳಿ ಇವರು ಪ್ರಕಟಿಸಿದ "ಪಡುಗಡಲ ತೆರೆಮಿಂಚು" ಗಜಲ್ ಸಂಕಲನವನ್ನು ಗಣ್ಯರ ಸಮಕ್ಷಮ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಗಜಲ್ ನಮಹತ್ವ ಹಾಗೂ ವೈಶಿಷ್ಟ್ಯಗಳನ್ನು ವಿವರಿಸುತ್ತಾ ಸಂಕಲನದ ಗಜಲ್ ಒಂದನ್ನು ವಾಚಿಸಿ ಅದರ ತುಳು ಅನುವಾದವನ್ನೂ ಪ್ತಸ್ತುತ ಪಡಿಸಿದರು.ತನ್ನದೇ ಆದ ನಿಯಮಗಳಿಂದ ಪ್ರತ್ಯೇಕತೆಯನ್ನು ಹೊಂದಿದ್ದರೂ ವಿಶಿಷ್ಟ ಅರ್ಥ ಕೊಡುವ ಸಂವಾದಗಳ ಮುಖಾಂತರ ವಿಷಯ ಪ್ರತಿಪಾದನೆಯೇ ಗಜಲ್ ನ ಉದ್ದೇಶವೂ ಆಗಿದ್ದು ಪುರಾತನ ಸಾಹಿತ್ಯಗಳಂತೆಯೇ ಅಂತ್ಯದಲ್ಲಿ ಅಂಕಿತನಾಮವನ್ನು ಇರಿಸುವ ಪರಿಪಾಠವೂ ಗಜಲ್ ನ ಕೊನೆಯ ಮಕ್ತಾದಲ್ಲಿ ಅಡಗಿರುವ ವಿಚಾರದ ಪ್ರಸ್ತಾಪ ಮಾಡಿದರು.
ಖ್ಯಾತ ಸಾಹಿತಿ, ಉಪಾನ್ಯಾಸಕ ರಘು ಇಡ್ಕಿದು ಅವರು ಗಜಲ್ ಸಂಕಲನದ ತ್ರಿಭಾಷಾ ಗಜಲ್ ಗಳ ಬಗ್ಗೆ ಮನೋಜ್ಞ ವಿವರಣೆ ನೀಡಿದರು. ಅವರು ಮುಂದುವರಿದು ಗಜಲ್ ಗಳ ರದೀಫ್ ಕಾಫಿಯಾ ಇರಿಸುವಲ್ಲಿ, ಷೇರುಗಳ ಭಾವ ಕುಂದದ ಹಾಗೆ ನೋಡಿಕೊಳ್ಳುವಲ್ಲಿ ನೆಗಳಗುಳಿ ಗಮನ ಹರಿಸಿದ್ದಾರೆ ಎಂದರು. ಖ್ಯಾತ ಬಹುಭಾಷಾ ಕವಿ ಮಹಮ್ಮದ್ ಬಡ್ಡೂರ್ ರವರು ಗಜಲ್ ಹುಟ್ಟಿದ ಪರಿ ಹಾಗೂ ಒಳಗೊಂಡಿರಬೇಕಾದ ಭಾವಗಳ ಪ್ರಸ್ತಾವನೆ ಗೈದರು.ಸಂವಾದವೇ ಗಾಯನ ರೂಪ ತಾಳಿ ಹೊಸ ವಿಚಾರವನ್ನು ಕೊಡ ಮಾಡಿದಾಗ ಶ್ರೋತೃಗಳಿಂದ "ವಾವಾ" ಎಂಬ ಉದ್ಗಾರ ಬರುವಂತಹ ಪ್ರಮೇಯವೇ ಗಜಲ್ ನ ಸತ್ವಕ್ಕೆ ಸಾಕ್ಷಿ ಎಂದರು. ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಚಲನ ಚಿತ್ರನಟ ಮಾಜೀ ಯೋಧ ಚುಸಾಪ ಜಿಲ್ಲಾಧ್ಯಕ್ಷ ತಾರಾನಾಥ ಬೋಳಾರ, ಪುತ್ತೂರಿನ ಶಾಂತಾ ಟೀಚರ್, ಚುಸಾಪ ಜೊತೆ ಕಾರ್ಯದರ್ಶಿ ವಿಜಯಲಕ್ಷ್ಮಿ ಕಟೀಲು, ಜಯಾನಂದ ಪೆರಾಜೆ ,ಗೋಪಾಲಕೃಷ್ಣ ಭಟ್ ಮನವಳಿಕೆ, ಆಕಾಶವಾಣಿಯ ಅಕ್ಷತಾ ರಾಜ್ ಪೆರ್ಲ, ಗಜಲ್ ಕವಯಿತ್ರಿ ಚೇತನಾ ಕುಂಬಳೆ ಇವರುಗಳು ಸಮಯೋಚಿತವಾಗಿ ಸಂಕಲನದ ವಿಶೇಷತೆಯನ್ನು ಪ್ರತಿಪಾದಿಸಿದರು.
ಕೃತಿಕಾರ ಡಾ. ಸುರೇಶ ನೆಗಳಗುಳಿ ಯವರು ತಾನು ಗಜಲ್ ಬರೆಯುವ ಮನಮಾಡಿದ ಸಂದರ್ಭ ಹಾಗೂ ಮೂಡಿದ ಆಸಕ್ತಿಯನ್ನು ಸಕಾರಣವಾಗಿ ವಿವರಿಸಿತ್ತಾ , ರದೀಫ್, ಕಾಫಿಯಾ, ಮತ್ಲ, ಮಕ್ತ ಇತ್ಯಾದಿ ನಿಯಮಗಳ ಅಗತ್ಯವನ್ನು ಒತ್ತಿ ಹೇಳಿದರು. ಇದೇ ಸಂದರ್ಭ ಆಸಕ್ತರ ಕರೆಗಳನ್ನು ಸ್ವೀಕರಿಸಿ ಸಂವಾದ ಮಾಡಲಾಯಿತು.
ನಿರೂಪಕರಾಗಿ ತುಳು ಕಾರ್ಯಕ್ರಮ ಮುಖ್ಯಸ್ಥ ಡಾ. ಸದಾನಂದ ಪೆರ್ಲರ ಸಾರಥ್ಯದಲ್ಲಿ, ನಿಲಯ ನಿರ್ದೇಶಕಿ ಕಾರ್ಯಕ್ರಮ ಮುಖ್ಯಸ್ಥೆ ಉಷಾಲತಾ ಸರಪಾಡಿಯವರ ಸ್ವಾಗತ ಸಹಿತವಾಗಿ ಅತ್ಯಂತ ಸೊಗಸಾಗಿ ಕಾರ್ಯಕ್ರಮ ಬಾನುಲಿ ಪ್ರಿಯರಾದ ಲಕ್ಷಾಂತರ ಶೋತೃಗಳಿಗೆ ಬಿತ್ತರವಾಯಿತು.
ಇದೇ ಸಂದರ್ಭದಲ್ಲಿ ಉದ್ಘೋಷಕರಾಗಿ ಅಶ್ವಿನ್ ಕುಮಾರ್ ಮತ್ತು ರಾಧಾಕೃಷ್ಣ ಶೆಟ್ಟಿ ಬಾಯಾರು, ಹಾಗೂ ತಾಂತ್ರಿಕ ವಿಭಾಗದಲ್ಲಿ ಚಂದ್ರಶೇಖರ ಪಾಣಾಜೆ, ಮಹಮ್ಮದ್ ಶಾನವಾಜ್ ,ರೇವತಿ ಪ್ರವೀಣ ಮತ್ತು ಮೋಹನ್ ದಾಸ್ ಮರೋಳಿಯವರು ಸಹಕಾರ ನೀಡಿದ್ದರು.