ಮೊದಲು ಶುದ್ದ ನೀರು ಕೊಡಿ-ಇಲ್ಲ ಓಟು ಹಾಕೋದಿಲ್ಲ! ಪಜಿಂಗಾರು ನಿವಾಸಿಗಳಿಂದ ಚುನಾವಣಾ ಬಹಿಷ್ಕಾರ
0
ಏಪ್ರಿಲ್ 01, 2019
ಮಂಜೇಶ್ವರ: ಮೊದಲು ನೀರು ಒದಗಿಸಿ, ಆಮೇಲೆ ಓಟು ಕೇಳಲು ಬನ್ನಿ ಎಂಬ ಅಡಿ ಟಿಪ್ಪಣಿಯೊಡನೆ ಪಜಿಂಗಾರು ಗ್ರಾಮಸ್ಥರು ಮತದಾನ ಬಹಿಷ್ಕರಿಸುವ ಹೇಳಿಕೆಯನ್ನೊಳಗೊಂಡ ಫಲಕವೊಂದು ಮೀಂಜ ಗ್ರಾ.ಪಂ. ಪಜಿಂಗಾರ್ ನಲ್ಲಿ ಕಂಡುಬಂದಿದೆ. ನೀರು ಒದಗಿಸದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ಈ ಮೂಲಕ ರಾಜಕೀಯ ನಾಯಕರಿಗೆ ಎಚ್ಚರಿಕೆ ನೀಡಲಾಗಿದೆ.
ಮೀಂಜ ಗ್ರಾ.ಪಂ. ನ 13ನೇ ವಾರ್ಡ್ ಬೆಜ್ಜ ಹಾಗೂ 10ನೇ ವಾರ್ಡ್ ಮೂಡಂಬೈಲು ಪರಿಸರಕ್ಕೆ ಪಜಿಂಗಾರಿನಲ್ಲಿ ನಿರ್ಮಿಸಿರುವ ಜಲನಿಧಿ ಯೋಜನೆಯ ಟ್ಯಾಂಕ್ ನಿಂದ ಕುಡಿಯುವ ಶುದ್ದ ಜಲ ವಿತರಣೆ ನಡೆಯುತ್ತಿದೆ. ಆದರೆ ವಿತರಿಸಲಾಗುವ ನೀರು ಕಲುಶಿತಗೊಂಡು ಬಳಸಲಾರದ ಸ್ಥಿತಿಯಲ್ಲಿದೆ. ಈ ಬಗ್ಗೆ ಹಲವು ಬಾರಿ ಅಧಿಕೃತರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪ.ಜಾತಿ ಯ ಸುಮಾರು 25 ಕ್ಕಿಂತಲೂ ಮಿಕ್ಕಿದ ಕುಟುಂಬಗಳಿಗೆ ಈ ಟ್ಯಾಂಕ್ ನ ಮೂಲಕ ನೀರು ಸರಬರಾಜಾಗುತ್ತಿದೆ. ಆದರೆ ವಿತರಣೆಗೊಳ್ಳುವ ನೀರು ಬಳಸಲಾಗದಷ್ಟು ಕಲುಶಿತಗೊಂಡಿರುವುದರಿಂದ 100ಕ್ಕಿಂತಲೂ ಮಿಕ್ಕಿದ ನಾಗರಿಕರು ಸಂಕಷ್ಟಕ್ಕೀಡಾಗಿದ್ದಾರೆ. ಇದನ್ನು ಪ್ರತಿಭಟಿಸಿ ಗತ್ಯಂತರವಿಲ್ಲದೆ ಈ ಬಹಿಷ್ಕಾರ ಎಚ್ಚರಿಕೆಯ ಫಲಕ ಸ್ಥಾಪಿಸಲಾಗಿದೆ.