ಬದಿಯಡ್ಕ: ಸೋಮವಾರ ಕೇರಳ ಸಹಿತ ಕರಾವಳಿಯ ಜನತೆ ಹೊಸ ವರ್ಷ ಚಾಂದ್ರಯುಗಾದಿ ವಿಷುವಿನ ಸಂಭ್ರಮದಲ್ಲಿ ಮಿಂದೇಳುತ್ತಿದ್ದರೆ ಬದಿಯಡ್ಕದ ಪಾಲಿಗೆ ಅದು ಮತ್ತಷ್ಟು ಸಂಭ್ರಮದ ದಿನವಾಗಿ ಗುರುತಿಸಲ್ಪಟ್ಟಿತು. ಕರ್ನಾಟಕ ಪಿಯು ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಈ ಪೈಕಿ ವಾಣಿಜ್ಯ ವಿಭಾಗದಲ್ಲಿ ಕರ್ನಾಟಕ ರಾಜ್ಯಕ್ಕೇ ಪ್ರಥಮ ರ್ಯಾಂಕ್ ಪಡೆದ ಈರ್ವರು ವಿದ್ಯಾರ್ಥಿಗಳಲ್ಲಿ ಓರ್ವನಾದ ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಶ್ರೀಕೃಷ್ಣ ಶರ್ಮನ ಹುಟ್ಟೂರು ಬದಿಯಡ್ಕ ಸಮೀಪದ ಕಡಪ್ಪು.
ಕಡಪ್ಪು ಸುಬ್ರಹ್ಮಣ್ಯ ಭಟ್-ಶಾರದಾ ದಂಪತಿಗಳ ಏಕೈಕ ಪುತ್ರನಾದ ಶ್ರೀಕೃಷ್ಣ ಶರ್ಮ ಪ್ರಸ್ತುತ ಸಾಲಿನ ಕರ್ನಾಟಕ ಪಿಯು ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ 596 ಅಂಕಗಳೊಂದಿಗೆ ತೇರ್ಗಡೆಯಾಗಿದ್ದು ಗಡಿನಾಡಿಗೆ ಹೆಮ್ಮೆ ತಂದಿದ್ದಾನೆ. ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದಲ್ಲಿ ಪ್ರಾಥಮಿಕ ಹಂತದಿಂದ ಹೈಸ್ಕೂಲ್ ತನಕ ವ್ಯಾಸಂಗಗೈದು ಪಿಯು ಶಿಕ್ಷಣವನ್ನು ಅಳಿಕೆ ವಿದ್ಯಾಸಂಸ್ಥೆಯಲ್ಲಿ ಪೂರೈಸಿದ್ದಾನೆ. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಶ್ರೀಕೃಷ್ಣ ಶರ್ಮ ಮಿತಭಾಷಿಯಾಗಿ ತನಗೆ ಲಭ್ಯವಾಗಿರುವ ರ್ಯಾಂಕ್ ನಿರೀಕ್ಷಿತ ಎಂದು ತಿಳಿಸಿದ್ದಾನೆ.
ಬದಿಯಡ್ಕದಿಂದ ಸುಮಾರು 2.5 ಕಿಲೋಮೀಟರ್ ದೂರದ ಕಡಪ್ಪಿನಿಂದ ಪ್ರತಿನಿತ್ಯ ಅಳಿಕೆಗೆ ಬಸ್ ಮೂಲಕ ಸಂಚರಿಸಿ ವ್ಯಾಸಂಗಗೈದಿರುವ ಶ್ರೀಕೃಷ್ಣ ಶರ್ಮ, ಆಧುನಿಕ ಅನುಕೂಲತೆಗಳ ನೆರವಿಲ್ಲದೆ ಕಠಿಣ ಪರಿಶ್ರಮದ ಮೂಲಕ ಈ ಸಾಧನೆಗೈದಿದ್ದಾನೆ. ತನ್ನ ಮನೆಯಿಂದ ಬದಿಯಡ್ಕಕ್ಕೆ ಕಾಲ್ನಡಿಗೆ ಮೂಲಕ ತೆರಳಿ,ಬಳಿಕ ಬಸ್ ನಲ್ಲಿ ಕಾಲೇಜು ತಲಪುತ್ತಿದನು. ತುಂಬಿರುವ ಕೂಡು ಕುಟುಂಬದೊಂದಿಗೆ ವಾಸಿಸುತ್ತಿರುವ ಶರ್ಮನ ಕಲಿಕೆಗೆ ಹೆತ್ತವರು, ಕಾಲೇಜು ಪ್ರಾಧ್ಯಾಪಕರ ನಿರಂತರ ಪ್ರೋತ್ಸಾಹ ನೆರವಾಗಿ ಶ್ರೀರಕ್ಷೆಯೊದಗಿಸಿತೆಂದು ತಿಳಿಸುತ್ತಾನೆ.
ಮಂಗಳೂರು ಕೇಂದ್ರೀಕರಿಸಿ ವಾಣಿಜ್ಯ ವಿಭಾಗದಲ್ಲಿ ಪದವಿ ಶಿಕ್ಷಣವನ್ನು ಮುಂದುವರಿಸಲು ಪ್ರಸ್ತುತ ಉದ್ದೇಶಿಸಲಾಗಿದ್ದು, ತನಗೆ ದೊರಕಿರುವ ರ್ಯಾಂಕ್ ಹೆತ್ತವರಿಗೆ ಅರ್ಪಣೆ ಎಂದು ತಿಳಿಸಿದ್ದಾನೆ.
ಮುಖ್ಯಾಂಶ:
ಬದಿಯಡ್ಕದಿಂದ ಸುಮಾರು ಎರಡೂವರೆ ಕಿಲೋಮಿಟರ್ ದೂರದ ಕಡಪ್ಪು ಆಧುನಿಕ ವ್ಯವಸ್ಥೆಗಳಿಂದ ವಂಚಿತವಾಗಿರುವ ಕುಗ್ರಾಮ. ಸರಿಯಾದ ಸಂಪರ್ಕ ರಸ್ತೆಯಾಗಲಿ, ವಾಹನ ಸೌಕರ್ಯಗಳಾಗಲಿ ಇಲ್ಲದೆ ಅಡಿಕೆ, ತೆಂಗು ಬಾಳೆಗಳ ತೋಟಗಳಿಂದ ಆವೃತ್ತವಾಗಿರುವ ಇಲ್ಲಿಯ ಪರಿಸರದಿಂದ ಹುಡುಗನೊಬ್ಬ ಇಂತಹ ಅಸಾಧಾರಣ ಸಾಧನೆಗೈದಿರುವುದು ನಾಡಿನೆಲ್ಲೆಡೆ ಹರ್ಷಕ್ಕೆ ಕಾರಣವಾಗಿದೆ.
ಅಳಿಕೆಯ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಪಿಯು ವಾಣಿಜ್ಯ ವಿಭಾಗದಲ್ಲಿ ಅಭ್ಯಸಿಸಿರುವ ಶ್ರೀಕೃಷ್ಣ ಶರ್ಮ, ವಾಣಿಜ್ಯ ಶಾಸ್ತ್ರದ ಬೇಸಿಕ್ ಮೆಥಮೇಟಿಕ್ಸ್, ಸ್ಟಾಟಿಟಿಕ್ಸ್, ಬಿಸಿನೆಸ್ ಸ್ಟಡಿ, ಅಕೌಂಟೆನ್ಸಿ ವಿಷಯಗಳಲ್ಲಿ 100 ಅಂಕಗಳನ್ನೂ, ಭಾಷಾ ಜ್ಞಾನಕ್ಕೆ ಸಂಬಂಧಿಸಿ ಸಂಸ್ಕøತದಲ್ಲಿ 100 ಅಂಕಗಳನ್ನು ಪಡೆದಿದ್ದು, ಆಂಗ್ಲ ಭಾಷೆಯಲ್ಲಿ 96 ಅಂಕಗಳೊಂದಿಗೆ ತೇರ್ಗಡೆಹೊಂದಿದ್ದಾನೆ.