ಉಪ್ಪಳ: ದೇಹ ಮತ್ತು ಆತ್ಮನ ಮಧ್ಯೆ ಭಕ್ತಿ ಎನ್ನುವುದು ಮಾಧ್ಯಮವಾಗಿ ಹೇಗೆ ಭಗವಂತನ ಸಾಯುಜ್ಯಕ್ಕೆ ಕಾರಣವಾಗುವುದೋ ಹಾಗೆಯೇ ಒಳ ಮತ್ತು ಹೊರಗಿನ ಶ್ರದ್ದೆಗೆ ಪೂರಕವಾಗಿ ದೇವಾಲಯಗಳ ಗರ್ಭಗೃಹದ ಬಿಂಬ ಮತ್ತು ನಮ್ಮೊಳಗಿನ ಆತ್ಮನ ಪ್ರತಿಬಿಂಬದ ಮಧ್ಯೆ ಆಲಯದ ಬಾಗಿಲು ಮಿತಿಯೊಂದರ ಮೂಲಕ ಹರಸುತ್ತದೆ ಎಂದು ಕಾಸರಗೋಡು ಶ್ರೀಮಲ್ಲಿಕಾರ್ಜುನ ದೇವಾಲಯದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಹಿರಿಯ ವೈದ್ಯ ಡಾ.ಅನಂತ ಕಾಮತ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬಾಯಾರು ಸಮೀಪ ಹಿರಣ್ಯದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀವನದುರ್ಗಾಪರಮೇಶ್ವರಿ ದೇವಾಲಯದ ಗರ್ಭಗೃಹದ ದಾರಂದ ಮುಹೂರ್ತವನ್ನು ಶುಕ್ರವಾರ ನಿರ್ವಹಿಸಿ ಅವರು ಮಾತನಾಡಿದರು.
ಭಗವಂತನ ಅಚಲ ಶ್ರದ್ದೆಯಿಂದ ಜೀವನದ ಸಂಕಷ್ಟಗಳಿಂದ ಪಾರಾಗಲು ಸಾಧ್ಯವಾಗುವುದು. ಸಮಾಜದ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಜೊತೆಯಾಗಿ ನಿರ್ವಹಿಸುವ ಕಾರ್ಯಯೋಜನೆಗಳು ಸದಾ ನೆಮ್ಮದಿಯನ್ನು ಒದಗಿಸುವುದು. ಧನಾತ್ಮಕ ಶಕ್ತಿ ಕೇಂದ್ರಗಳಾದ ದೇವಾಲಯಗಳ ಪುನರುತ್ಥಾನ ಪರೋಕ್ಷವಾಗಿ ಸಮಾಜದ ಸಂತೃಪ್ತತೆಗೆ ಕಾರಣವಾಗುವುದು ಎಂದುಬ ಅವರು ಈ ಸಂದರ್ಭ ತಿಳಿಸಿದರು.
ಮೋನಪ್ಪ ಶೆಟ್ಟಿ ಕಟ್ನಬೆಟ್ಟು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ವೈದಿಕ ವಿದ್ವಾಂಸ ಪರಕ್ಕಜೆ ಅನಂತನಾರಾಯಣ ಭಟ್ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ತಿರುಮಲೇಶ್ವರ ಭಟ್ ಹಿರಣ್ಯ, ಈಶ್ವರ ಭಟ್ ಚೇರಾಲು, ನಾರಾಯಣ ಭಟ್ ಮಾಣಿಪ್ಪಾಡಿ, ರಾಮಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು. ಪಡಾರು ಬಾಲಕೃಷ್ಣ ಶೆಟ್ಟಿ ಕಂಬಳಗದ್ದೆ ಗುತ್ತು ಸ್ವಾಗತಿಸಿ, ವಂದಿಸಿದರು. ಪ್ರೊ.ಎ.ಶ್ರೀನಾಥ್ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.