ಮುಳ್ಳೇರಿಯ: ಮುಳ್ಳೇರಿಯ ಹವ್ಯಕ ಮಂಡಲದ ಮಾಸಿಕ ಸಭೆಯು ಮಡಿಕೇರಿಯ ಕೊಡಗು ಹವ್ಯಕ ವಲಯ ಕಾರ್ಯದರ್ಶಿ ಡಾ ರಾಜಾರಾಮ ಭಟ್ ಅವರ ನಿವಾಸದಲ್ಲಿ ಭಾನುವಾರ ಜರಗಿತು.
ದಿ.ೀಪಜ್ವಲನ, ಧ್ವಜಾರೋಹಣ, ಶಂಖನಾದ, ಗುರುವಂದನೆ, ಗೋಸ್ತುತಿಯೊಂದಿಗೆ ಸಭೆ ಪ್ರಾರಂಭವಾಯಿತು. ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಪ್ರಾಸ್ತಾವಿಕ ನುಡಿಗಳನ್ನಾಡಿ, ವರದಿ ವಾಚಿಸಿದರು.
ವಲಯ ಪದಾಧಿಕಾರಿಗಳು ವಲಯ ವರದಿಗಳನ್ನಿತ್ತರು. ವಿಭಾಗ ಪ್ರಧಾನ ಆಯಾ ವಿಭಾಗಗಳ ವರದಿ ನೀಡಿ ಮಾಹಿತಿಗಳನ್ನಿತ್ತರು. ಸಭೆಯಲ್ಲಿ ಶ್ರೀಮಠದ ಮಾರ್ಗದರ್ಶನದಲ್ಲಿ ಜರಗಿದ ವಿವಿಧ ಸಮಾರಂಭಗಳ ಕುರಿತು ಅವಲೋಕನೆ ಮಾಡಲಾಯಿತು.
ಶ್ರೀಮಠದ ಸಕ್ರಿಯ ಕಾರ್ಯಕರ್ತೆ, ಮಹಿಳಾ ಸಬಲೀಕರಣದತ್ತ ವಿಶೇಷ ಕಾರ್ಯಚಟುವಟಿಕೆ, ಸೀತಾಮಾತೆಯ ಆದರ್ಶಗಳನ್ನು ಪಾಲಿಸುತ್ತಾ ಸಾಮಾಜಿಕವಾಗಿ ವಿಶೇಷ ಸಾಧನೆಗೈದ ಮಾತೆಗೆ ಶ್ರೀರಾಮಚಂದ್ರಾಪುರ ಮಠ ರಾಮೋತ್ಸವದ ಸಂದರ್ಭದಲ್ಲಿ ಶ್ರೀ ಸಂಸ್ಥಾನದವರಿಂದ ಪ್ರದಾನಿಸುವ ಶ್ರೀಮಾತಾ ಪ್ರಶಸ್ತಿ ಪಡೆದ ಮಹಾಮಂಡಲಾಧ್ಯಕ್ಷೆ ಈಶ್ವರಿ ಬೇರ್ಕಡವು ಇವರನ್ನು ಶಾಲು ಹೊದೆಸಿ ಫಲವನ್ನಿತ್ತು ಗೌರವಿಸರಾಯಿತು.
ಸಭೆಯಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿ ಕೀರ್ತಿಗೆ ಭಾಜನರಾದ ಕಾಸರಗೋಡಿನ ಪೆರಡಾಲ ಕಡಪ್ಪು ಶ್ರೀಕೃಷ್ಣ ಶರ್ಮ ಇವರನ್ನು ಶಾಲುಹೊದೆಸಿ ಫಲನೀಡಿ ಅಭಿನಂದಿಸಲಾಯಿತು. ಪಿಯುಸಿ ವಾಣಿಜ್ಯ ವಿಭಾಗಲ್ಲಿ ಶೇ.96.4 ಅಂಕವನ್ನು ಗಳಿಸಿ ವಿಶೇಷ ಸಾಧನೆ ಮಾಡಿದ ವಿರಾಜಪೇಟೆ ಗುರಿಕ್ಕಾರರಾದ ಕೆ ಶ್ಯಾಮ ಮತ್ತು ಉಷಾ ದಂಪತಿ ಪುತ್ರಿ ಕು.ಕೆ. ಪಾವನಿ ಅವರನ್ನು ಶಾಲುಹೊದೆಸಿ ಫಲನೀಡಿ ಅಭಿನಂದಿಸಲಾಯಿತು.
ಮಂಡಲ ಗುರಿಕ್ಕಾರ ಸತ್ಯನಾರಾಯಣ ಭಟ್ ಮೊಗ್ರ ಅವರು ಮಹಾಪಾದುಕಾಪೂಜೆಯ ಯಶಸ್ವಿಗಾಗಿ ಕಾರ್ಯಕರ್ತರನ್ನು ಅಭಿನಂದಿಸಿ ಮುಂದೆಯೂ ಗುರುಸೇವೆಯಲ್ಲಿ ಮುಂಚೂಣಿಯಲ್ಲಿದ್ದು ಕಾರ್ಯನಿರತರಾಗೋಣ ಎಂದರು. ಮಂಡಲಾಧ್ಯಕ್ಷ ಪ್ರೊ. ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಾಮೂಹಿಕ ರಾಮಜಪ, ಶಾಂತಿಮಂತ್ರ, ಧ್ವಜಾವರೋಹಣ ಶಂಖನಾದವಾಗಿ ಸಭೆ ಮುಕ್ತಾಯವಾಯಿತು.