ಛತ್ತೀಸ್ ಗಢ: ಸೇನೆಯನ್ನು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಬಲವಾಗಿ ಕೇಳಿಬರುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು, ನಿಮ್ಮ 'ಒಂದು ವೋಟ್'ನ ಬಲದಿಂದ ಪಾಕಿಸ್ತಾನ ಮೇಲೆ ಸರ್ಜಿಕಲ್ ಸ್ಟ್ರೈಕ್ ಮತ್ತು ವೈಮಾನಿಕ ದಾಳಿ ನಡೆಸಲು ಸಾಧ್ಯವಾಯಿತು ಎಂದು ಮಂಗಳವಾರ ಹೇಳಿದ್ದಾರೆ.
ನಿನ್ನೆ ಛತ್ತೀಸ್ ಗಡದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಇಂದು ಸರ್ಜಿಕಲ್ ಸ್ಟ್ರೈಕ್, ವೈಮಾನಿಕ ದಾಳಿ ಮತ್ತು ಅಂತರಿಕ್ಷದಲ್ಲಿನ ಉಪಗ್ರಹ ಹೊಡೆದುರಳಿಸಲು ನಿಮ್ಮ ಒಂದು ಮತವೇ ಕಾರಣ ಎಂದರು.
ಪ್ರಧಾನಿ ಮೋದಿ ಕಳೆದ ಬಾರಿ ಮಹಾರಾಷ್ಟ್ರದ ಲಾತೂರ್ ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಬಾಲಕೋಟ್ ವೈಮಾನಿ ದಾಳಿ ಪ್ರಸ್ತಾಪಿಸಿದ ಬಗ್ಗೆ ಚುನಾವಣಾ ಆಯೋಗ ಅಧಿಕಾರಿಗಳಿಂದ ವರದಿ ಕೇಳಿದೆ. ಅಧಿಕಾರಿಗಳು ವರದಿ ನೀಡುವ ಮುನ್ನವೇ ಪ್ರಧಾನಿ ಮೋದಿ ಮತ್ತೆ ವೈಮಾನಿಕ ದಾಳಿಯನ್ನು ಪ್ರಸ್ತಾಪಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಕಾಂಗ್ರೆಸ್ ಜನರಿಗೆ ದ್ರೋಹ ಮಾಡುವುದರಲ್ಲಿ ಪಿಎಚ್ ಡಿ ಮಾಡಿದೆ. ಛತ್ತೀಸ್ ಗಢದಲ್ಲಿ ಮಾವೋವಾದಿಗಳ ಸಂಖ್ಯೆ ಹೆಚ್ಚಲು ಕಾಂಗ್ರೆಸ್ ಕಾರಣ. ಕಾಂಗ್ರೆಸ್ ನಕ್ಸಲರನ್ನು ಕ್ರಾಂತಿಕಾರಿಗಳು ಎಂದು ಕರೆದಿರುವುದು ಅವರ ಆತ್ಮವಿಶ್ವಾಸ ಹೆಚ್ಚಲು ಕಾರಣವಾಗಿದೆ ಎಂದು ಆರೋಪಿಸಿದರು.
ಸೇನಾತುಕಡಿಗಳ ವಿಶೇಷಾಧಿಕಾರ ಕಾನೂನುಗಳ ಬಗ್ಗೆ ಪ್ರಸ್ತಾಪಿಸಿದ ಮೋದಿ, ಜಮ್ಮು ಮತ್ತು ಕಾಶ್ಮೀರದಂತಹ ಪ್ರದೇಶಗಳಲ್ಲಿ ಸೇನಾ ತುಕಡಿಗಳಿಗೆ ಇರುವ ವಿಶೇಷಾಧಿಕಾರಿಗಳನ್ನು ಕಿತ್ತೊಗೆಯಲು ಕಾಂಗ್ರೆಸ್ ಬಯಸುತ್ತಿದೆ. ಕಾಂಗ್ರೆಸ್ ಗೆ ಈ ದೇಶದ ಜನರ ಬಗ್ಗೆ ಗೊತ್ತಿಲ್ಲ. ದೇಶ ಮತ್ತು ದೇಶದ ಜನತೆ ಜತೆ ಆಟವಾಡುವ ಜನರ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂದರು.