ಕಾಸರಗೋಡು: ಶಬರಿಮಲೆ ವಿಷಯವನ್ನು ಚುನಾವಣಾ ಪ್ರಚಾರದ ವೇಳೆ ಹೇಗೆ ಬಳಸಬೇಕೆಂಬುದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಮಾದರಿಯಾಗಿಸಬಹುದೆಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಟಿಕಾರಾಮ್ ಮೀಣ ಅಭಿಪ್ರಾಯಪಟ್ಟಿದ್ದಾರೆ.
ಕಲ್ಲಿಕೋಟೆಯಲ್ಲಿ ನಡೆದ ಎನ್‍ಡಿಎ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶಬರಿಮಲೆಯನ್ನು ಪರಾಮರ್ಶಿಸದೆ ಆಚಾರ ಅನುಷ್ಠಾನಗಳ ಬಗ್ಗೆ ಮಾತನಾಡಿರುವುದು ಒಂದು ಗಮನೀಯ ಅಂಶವಾಗಿದೆ ಎಂದಿದ್ದಾರೆ.
ಶಬರಿಮಲೆ ವಿಷಯವನ್ನು ಚುನಾವಣಾ ಪ್ರಚಾರ ವೇಳೆ ಎತ್ತಬಹುದು. ಅದು ರಾಷ್ಟ್ರೀಯ ಮತ್ತು ಸಂಸ್ಕøತಿಗೆ ಸಂಬಂಧಪಟ್ಟ ವಿಷಯವಾಗಿದೆ. ಕಲ್ಲಿಕೋಟೆಯಲ್ಲಿ ನಡೆದ ಎನ್‍ಡಿಎ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಶಬರಿಮಲೆ ಎಂಬ ಪದವನ್ನು ಪ್ರಯೋಗಿಸದಿರುವುದು ಎಲ್ಲರಿಗೂ ಮಾದರಿಯಾಗಿದೆ. ಆಚಾರ, ಅನುಷ್ಠಾನಗಳ ಬಗ್ಗೆ ಮಾತ್ರವೇ ಅವರು ಮಾತನಾಡಿದ್ದರು. ಜನರನ್ನು ಕಾಡುತ್ತಿರುವ ದುರಂತಗಳ ಕುರಿತಾದ ವಿಷಯಗಳನ್ನು ಚುನಾವಣೆಯಲ್ಲಿ ಚರ್ಚಾ ವಿಷಯವನ್ನಾಗಿಸಬೇಕೆಂದು ಚುನಾವಣಾಧಿಕಾರಿ ಸಲಹೆ ನೀಡಿದ್ದಾರೆ.
ಎಲ್ಲಾ ರೀತಿಯ ಪ್ರಚಾರಗಳನ್ನು ಪರಿಶೀಲಿಸಲಾಗುವುದು. ಅದರಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಉಂಟಾದಲ್ಲಿ ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರಾಷ್ಟ್ರೀಯತೆ ಮತ್ತು ನಂಬುಗೆಯ ಹೆಸರಲ್ಲಿ ಮತ ಯಾಚಿಸಬಾರದೆಂದು ಚುನಾವಣಾ ನೀತಿ ಸಂಹಿತೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆಯೆಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಬಗ್ಗೆ ಕಾಸರಗೋಡು, ತೃಶ್ಶೂರು ಮತ್ತು ಕೊಲ್ಲಂ ಜಿಲ್ಲಾಧಿಕಾರಿಗಳಿಗೆ ಲಭಿಸಿದ ದೂರುಗಳನ್ನು ಆಯಾ ಜಿಲ್ಲಾಧಿಕಾರಿ ಪರಿಶೀಲಿಸಿ ಅಗತ್ಯದ ಕ್ರಮ ಕೈಗೊಳ್ಳಬಹುದೆಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.