ಕಾಸರಗೋಡು: ಮತದಾನ ನಡೆಸುವ ಮೂಲಕ ಇಷಾ ಇತಿಹಾಸದಲ್ಲಿ ಸ್ಥಳಾವಕಾಶ ಪಡೆದಿದ್ದಾರೆ.
ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಟ್ರಾನ್ಸ್ ಜೆಂಡರ್ ಆಗಿರುವ ಇಷಾ ಕಿಶೋರ್ ಲೋಕಸಭೆ ಚುನಾವಣೆ ಅಂಗವಾಗಿ ಕಾಂಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯ 135ನೇ ನಂಬ್ರ ಮತಗಟ್ಟೆಯಲ್ಲಿ ಐತಿಹಾಸಿಕ ಕ್ಷಣ ನಿರ್ಮಿಸಿದ್ದಾರೆ.
ಮತದಾನ ನಡೆಸಿರುವ ಮೂಲಕ ನನ್ನ ಅಧಿಕಾರ, ನನ್ನ ಹಕ್ಕು ನಾನು ವಿನಿಯೋಗಿಸಿದ್ದೇನೆ. ಈ ಮೂಲಕ ನನ್ನ ಅಸ್ತಿತ್ವ ತೋರಿದ್ದೇನೆ ಎಂದವರು ಈ ವೇಳೆ ಅಭಿಪ್ರಾಯಪಟ್ಟಿದ್ದಾರೆ. ಜನತೆಯ ಸಮಸ್ಯೆ ಅರಿತುಕೊಳ್ಳಬಲ್ಲ, ನಾಡಿನ ಅಭಿವೃದ್ಧಿಗಾಗಿ ದುಡಿಯಬಲ್ಲ, ಜನತೆಯ ಸಂರಕ್ಷಣೆ ಖಚಿತಪಡಿಸಬಲ್ಲ, ಅಭ್ಯರ್ಥಿ ಸಂಸದರಾಗಿ ಗೆದ್ದುಬರಬೇಕು. ಈ ನಿಟ್ಟಿನಲ್ಲಿ ಜನತೆಯ ಮತದಾನ ಮಹತ್ವದ ಪಾತ್ರ ವಹಿಸುತ್ತದೆ ಎಂದವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅನೇಕ ಮಂದಿ ಟ್ರಾನ್ಸ್ ಜೆಂಡರ್ ಗಳಿದ್ದರೂ, ಅವರು ಅಸ್ತಿತ್ವ ತೋರಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಸಮಾಜದ ದೃಷ್ಟಿಕೋನ ಬದಲಾಗದೇ ಇರುವುದು ಈ ನಿಟ್ಟಿನಲ್ಲಿ ಒಂದು ಹಂತದ ವರೆಗೆ ಕಾರಣವಾಗುತ್ತಿದೆ. ಹೆಚ್ಚುವರಿ ಟ್ರಾನ್ಸ್ ಜೆಂಡರ್‍ಗಳು ಮತದಾನ ನಡೆಸುವ ಮೂಲಕ ಸಮಾಜದ ದೃಷ್ಟಿಕೋನ ಬದಲಾಗುವ ಸಾ`À್ಯತೆಗಳಿವೆ ಎಂದವರು ಅಭಿಪ್ರಾಯಪಡುತ್ತಾರೆ.
ಕಾಂಞಂಗಾಡ್ ನಿವಾಸಿಯಾಗಿರುವ ಇಷಾ ಅವರು ಸ್ಥಳೀಯ ಸುದ್ದಿವಾಹಿನಿಯೊಂದರ ವಾರ್ತಾವಾಚಕಿಯಾಗಿದ್ದಾರೆ. ಮಾಡೆಲಿಂಗ್, ನೃತ್ಯ ಸಹಿತ ಕಲಾವಲಯದಲ್ಲಿ ಅವರು ಈಗಾಗಲೇ ಛಾಪು ಒತ್ತಿದ್ದಾರೆ.