ತೆರಿಗೆ ಸಂಗ್ರಹ ಮತ್ತು ಯೋಜನಾ ವೆಚ್ಚದಲ್ಲಿ ದಾಖಲೆ ಸೃಷ್ಟಿಸಿದ ವರ್ಕಾಡಿ ಗ್ರಾ. ಪಂ.
0
ಏಪ್ರಿಲ್ 05, 2019
ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯತು 2018-19 ನೇ ಸಾಲಿನಲ್ಲಿ 100 ಶೇ.ಆದಾಯ ಸಂಗ್ರಹ ಮತ್ತು ಶೇ.100ರ ಯೋಜನಾ ಮೊತ್ತ ವಿನಿಯೋಗಿಸಿ ಇತಿಹಾಸ ಸೃಷ್ಟಿಸಿದೆ. ಪಂಚಾಯತು ಆಡಳಿತ ಮಂಡಳಿಯ ಮತ್ತು ನಿರ್ವಹಣಾಧಿಕಾರಿ, ಸಿಬ್ಬಂದಿ ವರ್ಗದ ನಿರಂತರವಾದ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿರುವುದಾಗಿಯೂ, ವರ್ಕಾಡಿ ಗ್ರಾಮ ಪಂಚಾಯತಿಗೆ ಈ ಆರ್ಥಿಕ ವರ್ಷದಲ್ಲಿ 3.27 ಕೋಟಿ ರೂಪಾಯಿ ಯೋಜನೆ ಅನುದಾನ, 1.18 ಕೋಟಿ ಆಸ್ತಿ ಸಂರಕ್ಷಣೆ ಅನುದಾನ ದೊರಕಿರುವುದಾಗಿಯೂ ಪಂ. ಅಧ್ಯಕ್ಷ ಮಜೀದ್ ವರ್ಕಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲೆಯ 38 ಗ್ರಾ.ಪಂ.ಗಳ ಪೈಕಿ ವರ್ಕಾಡಿ ಗ್ರಾ. ಪಂ. 2018-2019 ರ ಸಾಲಿನಲ್ಲಿ ಧ್ವೀತೀಯ ಸ್ಥಾನವನ್ನು ಪಡಕೊಂಡಿದೆ. ಕಟ್ಟಡ ತೆರಿಗೆ, ಪರವಾನಿಗೆ ಫೀಸು, ವೃತ್ತಿ ತೆರಿಗೆ, ಕಟ್ಟಡ ಬಾಡಿಗೆ ವಲಯಗಳಲ್ಲಿ ಬರಬೇಕಾದ ಎಲ್ಲಾ ತರದ ಆದಾಯಗಳನ್ನು 100 ಶೇ. ಸಂಗ್ರಹಿಸಿ ಗ್ರಾ.ಪಂ. ಈ ವರ್ಷ ದಾಖಲೆ ಸೃಷ್ಟಿಸಿತು. ಪಂಚಾಯತಿಗೆ ಸಲ್ಲಬೇಕಾದ 35 ಲಕ್ಷ ರೂಪಾಯಿ ತೆರಿಗೆಯನ್ನು ಯಥಾ ಸಮಯದಲ್ಲಿ ವಸೂಲು ಮಾಡಿ ಈ ಸಾಧನೆ ಮಾಡಲಾಯಿತು.
ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 30 ಬಾವಿ, ಅಡಕಳ ಕಟ್ಟೆ ಬೋಳ್ನ, ಅರಿಬೈಲು ನಾಗಬ್ರಹ್ಮ ರಸ್ತೆ, ತೌಡುಗೋಳಿ ಕಾಪ್ರೆ ಅಡಕಳ ಕಟ್ಟೆ ಬೋಳ್ನ ರಸ್ತೆಗಳು ಸೇರಿದಂತೆ ಒಟ್ಟು 13 ರಸ್ತೆಗಳಿಗಾಗಿ ಈ ವರ್ಷ ಒಟ್ಟು 2,62,67,080 ರೂ.ಗಳನ್ನು ಗ್ರಾ.ಪಂ. ವಿನಿಯೋಗಿಸಿದೆ. 285 ಕುಟುಂಬಗಳಿಗೆ 100 ದಿನಗಳ 68750 ಉದ್ಯೋಗ ದಿನಗಳನ್ನು ಸೃಷ್ಟಿಸಿ ಜನರಿಗೆ ಉದ್ಯೋಗಾವಕಾಶವನ್ನು ಮಾಡಿಕೊಡಲಾಗಿದೆ. ಜೊತೆಗೆ 1.6 ಕಿಲೋ ಮೀಟರ್ ದೂರ ಕಾಂಕ್ರೀಟ್ ರಸ್ತೆ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಿರ್ಮಿಸಿ ಗ್ರಾಮ ಪಂಚಾಯತು ದಾಖಲೆ ಸೃಷ್ಟಿಸಿದೆ.
ವರ್ಕಾಡಿ ಗ್ರಾಮ ಪಂಚಾಯತಿನ ಈ ಸಾಧನೆಗೆ ಪಂಚಾಯತಿ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಮತ್ತು ನಿರ್ವಹಣಾಧಿಕಾರಿಗಳು, ಪಂಚಾಯತು ಸಿಬ್ಬಂದಿಗಳ ಸಹಕಾರದಿಂದ ಈ ಸಾಧನೆಯನ್ನು ಮಾಡಲು ಸಾಧ್ಯವಾಗಿರುವುದಾಗಿ ಪಂಚಾಯತು ಅಧ್ಯಕ್ಷರು ತಿಳಿಸಿದ್ದಾರೆ.