ದೊಂಪತ್ತಡ್ಕ ಕಗ್ಗಲು ಕೋರೆ: ಪರವಾನಗಿ ನವೀಕರಿಸದಂತೆ ಬಿಜೆಪಿ ಒತ್ತಾಯ
0
ಏಪ್ರಿಲ್ 01, 2019
ಮುಳ್ಳೇರಿಯ: ಬೆಳ್ಳೂರು ಗ್ರಾ.ಪಂ.ವ್ಯಾಪ್ತಿಯ ದೊಂಪತ್ತಡ್ಕದಲ್ಲಿ ಕಳೆದ 30 ವರ್ಷಗಳಿಂದ ಎಗ್ಗಿಲ್ಲದೆ ನಡೆಯುತ್ತಿರುವ ಕಗ್ಗಲು ಖನನದಿಂದ ಕೋರೆ ಆಸುಪಾಸು ಪ್ರದೇಶಗಳಲ್ಲಿ ನೀರಿನ ಕ್ಷಾಮ, ಭೂ ಸವಕಳಿ ಮೊದಲಾಗಿ ಪ್ರಾಕೃತಿಕ ಹಾಗೂ ಆರೋಗ್ಯ ಸಮಸ್ಯೆಗಳು ತಲೆದೋರಿದೆ.ಮಾರ್ಚ್ 31ರಂದು ಕೋರೆ ಪರವಾನಿಗೆ ಮುಗಿಯಲಿದ್ದು ಪರವಾನಗಿ ನವೀಕರಿಸದಂತೆ ಬಿಜೆಪಿ ಒತ್ತಾಯಿಸಿದೆ.
ಶನಿವಾರ ಮುಳ್ಳೆರಿಯದಲ್ಲಿ ಬಿಜೆಪಿ ಪಂಚಾಯಿತಿ ಸಮಿತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ರಾಜ್ಯ ಸಮಿತಿ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ, ಮಂಡಲಾಧ್ಯಕ್ಷ ಸುದಾಮ ಗೋಸಾಡ, ಪ್ರಧಾನ ಕಾರ್ಯದರ್ಶಿಗಳಾದ ಹರೀಶ್ ನಾರಂಪಾಡಿ, ಸುಕುಮಾರ ಕುದ್ರೆಪ್ಪಾಡಿ,ಬೆಳ್ಳೂರು ಬಿಜೆಪಿ ಪಂ. ಸಮಿತಿ ಕಾರ್ಯದರ್ಶಿ ಜಯಾನಂದ ಕುಳ, ಜನ ಪ್ರತಿನಿಧಿಗಳಾದ ಶ್ರೀಧರ ಬೆಳ್ಳೂರು, ಶಿವರಾಮ ಎನ್.ಎ., ಮಾಲತಿ ಜೆ.ರೈ, ಮತ್ತಿತರರು ಭಾಗವಹಿಸಿದ್ದರು.
ಎಪ್ರಿಲ್ ತಿಂಗಳ ಮೊದಲ ವಾರ ಪಂಚಾಯಿತಿ ಆಡಳಿತ ಸಮಿತಿ ಸಭೆ ನಡೆಯಲಿದೆ.ಈ ವೇಳೆ ಕಪ್ಪು ಕಲ್ಲಿನ ಕೋರೆಯ ಪರವಾನಗಿ ನವೀಕರಿಸದಂತೆ ನಿರ್ಧಾರ ಕೈಗೊಳ್ಳುವ ಬಗ್ಗೆ ಸೂಚನೆ ಲಭಿಸಿದೆ.
ಕೋರೆಯಲ್ಲಿ ಭಾರೀ ಸ್ಪೋಟಕಗಳನ್ನು ಬಳಸಲಾಗುತ್ತಿದ್ದು ಶಬ್ದ ಮಾಲಿನ್ಯ, ಭೂ ಕಂಪನ, ಭೂ ಕುಸಿತ, ಸಮೀಪದ ಮನೆ ಗೋಡೆಗಳಲ್ಲಿ ಬಿರುಕು ಉಂಟಾಗಿದ್ದು ಸ್ಥಳೀಯರು ಹಾಗೂ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಆರೋಪಿಸಿ ಬೆಳ್ಳೂರು, ಏತಡ್ಕ ಪರಿಸರ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಸ್ಥಳೀಯರು ಈ ಹಿಂದೆ ಭಾರೀ ಪ್ರತಿಭಟನೆ ನಡೆಸಿದ್ದರು.
ಮುಖ್ಯಾಂಶ:
ಕಪ್ಪು ಕಲ್ಲು ಕೋರೆ ಮಾಲಿಕರು ಸ್ಥಳೀಯವಾಗಿ ಜನರ ಬಾಯಿ ಮುಚ್ಚಿಸಲು ತಿಂಗಳ ಮಾಮೂಲು, ಇನ್ನಿತರ ಅಮಿಷ, ನೀಡುತ್ತಿದ್ದು ಹೋರಾಟದ ನೇತೃತ್ವ ವಹಿಸಿದ ಹಲವರಿಗೆ ಬೆದರಿಕೆ, ಹುಸಿ ಆಪಾದನೆ, ಸುಳ್ಳು ದೂರು ನೀಡಿತ್ತಿರುವುದಾಗಿಯೂ ಹೇಳಲಾಗುತ್ತಿದೆ.
ಕಳೆದ ಅಕ್ಟೋಬರ್ 10ರಂದು ಬೆಳ್ಳೂರು ಪಂಚಾಯಿತಿ ಕೋರೆಯ ಪರವಾನಿಗೆ ನವೀಕರಿಸದಿರಲು ಹಾಗೂ ರದ್ದುಗೊಳಿಸಲು ತೀರ್ಮಾನಿಸಿದ್ದರೂ ಕೆಲವೊಂದು ಕಾನೂನು ಅಡಚಣೆಗಳಿಂದ ಅದನ್ನು ಜಾರಿಗೆ ತರಲು ಸಾಧ್ಯವಾಗಿರಲಿಲ್ಲ.