ಕುಂಬಳೆ: ಕ್ಷಾತ್ರ ಪರಂಪರೆ ಮತ್ತು ಐತಿಹಾಸಿಕ ಹಿನ್ನೆಲೆಯಿಂದ ಬೆಳೆದು ಬಂದಿರುವ ರಾಮರಾಜ ಕ್ಷತ್ರಿಯ ಸಮಾಜದ ಪ್ರತಿಯೊಬ್ಬರು ಇತಿಹಾಸವನ್ನು ತಿಳಿದುಕೊಳ್ಳುವ ಮತ್ತು ಅಧ್ಯಯನ ಮಾಡಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ಮರಕಡ ಶ್ರೀ ಗುರು ಪರಾಶಕ್ತಿ ಮಠದ ಪರಮಪೂಜ್ಯ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿ ಅವರು ಹೇಳಿದರು.
ಕುಂಬಳೆ ಆರಿಕ್ಕಾಡಿ ಶ್ರೀ ಮಲ್ಲಿಕಾರ್ಜುನ ಮತ್ತು ಕೋಟೆ ಶ್ರೀ ವೀರಾಂಜನೇಯ ಸಭಾ ಮಂಟಪದಲ್ಲಿ ಆಯೋಜಿಸಿದ ಅಖಿಲ ಭಾರತ ರಾಮಕ್ಷತ್ರಿಯ ಸಮಾವೇಶವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿ ಸ್ವಾಮೀಜಿ ಅವರು ಮಾತನಾಡಿದರು.
ಆಚಾರ, ಅನುಷ್ಠಾನಗಳನ್ನು ಚಾಚು ತಪ್ಪದೆ ಪಾಲಿಸಬೇಕು. ಮುಂದಿನ ಭವಿಷ್ಯವನ್ನು ರೂಪಿಸುವ ಮಕ್ಕಳಿಗೆ ಮನೆಯಿಂದಲೇ ನಮ್ಮ ಸಮಾಜದ ಪರಂಪರೆ, ಸಂಸ್ಕøತಿಯನ್ನು ತಿಳಿಸಿಕೊಡುವ ಕೆಲಸಗಳಾಗಬೇಕು. ಈ ಮೂಲಕ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯನ್ನು ಸಾಧಿಸುತ್ತ ಸಮಾಜವನ್ನು ಬಲಪಡಿಸಬೇಕಾಗಿದೆ. ಇದು ಸಾಧ್ಯವಾಗಬೇಕಾದರೆ ಎಲ್ಲರೂ ಒಂದೇ ಸೂರಿನಡಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದು ಕರೆ ನೀಡಿದರು. ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳಿಗೆ ಶಿಕ್ಷಣ ನೀಡಲು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದ ಅವರು ಈ ಮೂಲಕ ಸಮಾಜದಲ್ಲಿ ಸಮಾನತೆಯನ್ನು, ಆರ್ಥಿಕವಾಗಿ ಸಬಲೀಕರಣ ಸಾಧಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕೇರಳ ಹೈಯರ್ ಜ್ಯುಡೀಶಿಯಲ್ ಸರ್ವೀಸ್ ಡಿಸ್ಟ್ರಿಕ್ಟ್ ಆ್ಯಂಡ್ ಸೆಷನ್ಸ್ ಜಡ್ಜ್ ಬಿ.ರಮಾಕಾಂತ ಬೇಕಲ್ ಅವರು ಅಧ್ಯಕ್ಷತೆ ವಹಿಸಿದರು. ಪ್ರಾಮಾಣಿಕತೆಗೆ, ಭಯ, ಭಕ್ತಿಗೆ ಮಾದರಿಯಾಗಿರುವ ರಾಮರಾಜ ಕ್ಷತ್ರಿಯ ಸಮಾಜ ಎಲ್ಲರಿಗೂ ಅನುಕರಣೀಯ. ಸಮಾಜವನ್ನು ಇನ್ನಷ್ಟು ಉನ್ನತಿಗೇರಿಸಲು ಸಮಾಜ ಒಗ್ಗಟ್ಟಿನಿಂದ ದುಡಿಯಬೇಕೆಂದು ಶ್ರೀ ಶೃಂಗೇರಿ ಶಂಕರ ಮಠದ ಕೋಟೆಕಾರು ಶಾಖೆಯ ಪ್ರಾಂತೀಯ ಧರ್ಮಾಧಿಕಾರಿ ಬೊಳ್ಳಾವ ಸತ್ಯಶಂಕರ ಅವರು ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ, ಬ್ರಹ್ಮಶ್ರೀ ಉಡುಪಿ ಮಾಧವ ಭಟ್, ವೇ.ಮೂ.ವಿದ್ವಾನ್ ಡಾ.ಸತ್ಯಕೃಷ್ಣ ಭಟ್ ಅವರು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ `ಶ್ರೀ ಆರಿಕ್ಕಾಡಿ ಕೋಟೆ' ಸ್ಮರಣ ಸಂಚಿಕೆಯನ್ನು ಸ್ವಾಮೀಜಿಯವರು ಬಿಡುಗಡೆಗೊಳಿಸಿದರು. ಶಕುಂತಳ ಕೋಟೆಕಾರು ಅವರು ಈ ಸಂದರ್ಭದಲ್ಲಿ ದಿವ್ಯ ಉಪಸ್ಥಿತರಿದ್ದರು.
ಮಾಜಿ ಶಾಸಕ ಜೆ.ಕೃಷ್ಣ ಪಾಲೆಮಾರ್, ರಾಮರಾಜ ಕ್ಷತ್ರಿಯ ಸಂಘ ಮುಂಬಯಿ ಅಧ್ಯಕ್ಷ ಬೆತ್ತಯ್ಯನ ಗಣಪತಿ, ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ರಾಜ್ ಕುಮಾರ್ ಕಾರ್ನಾಡ್, ಉಪಾಧ್ಯಕ್ಷ ರವೀಂದ್ರನಾಥ್ ಎನ್.ರಾವ್, ಎಸ್.ಕೆ.ನಾಯ್ಕ್, ಎಂ.ಡಿ.ನಾಯ್ಕ್, ಕರಾವಳಿ ಕಾವಲು ಪಡೆ ಸರ್ಕಲ್ ಇನ್ಸ್‍ಪೆಕ್ಟರ್ ಪ್ರಮೋದ್ ಕುಮಾರ್, ಜೆ.ಕೆ.ರಾವ್, ಬಿ.ಪಿ.ವೆಂಕಟ್ರಮಣ, ಡಾ.ಶಿವಾನಂದ ಬೇಕಲ್, ಕೆ.ಎನ್.ಸುಧಾಕರ್, ಕೆ.ನಿರಂಜನ ಕೊರಕ್ಕೋಡು, ಸೀತಾರಾಮ ಕೊಪ್ಪಲು. ಜೆ.ಧರ್ಮಪ್ರಕಾಶ್, ಶ್ರೀನಿವಾಸ ಜೆ, ಕೆ.ಬಾಲಚಂದ್ರ ರಾವ್, ಕುಂಬ್ಳೆ ಉಮೇಶ ರಾವ್ ಅತ್ತಾವರ, ಸುಗಂಧ ರಾಜ್ ಬೇಕಲ್, ಸಿ.ಕೆ.ನಾಗೇಶ್ ರಾವ್ ಬೆಂಗಳೂರು, ರಮೇಶ್ ಕುದ್ರೆಕ್ಕೋಡ್, ಆಶಾ ರಾಧಾಕೃಷ್ಣ ಅಣಂಗೂರು, ಭರತೇಶ್ ಕಾಸರಗೋಡು, ಕೆ.ಬಾಲಕೃಷ್ಣ ಕುಂಬಳೆ, ಕೆ.ಸುಧಾಕರ ಕುಂಬಳೆ, ಕೆ.ಜ್ಯೋತಿಷ್ ಕುಮಾರ್ ಆರಿಕ್ಕಾಡಿ, ಕೆ.ದಿನಕರ ರಾವ್ ಪೈವಳಿಕೆ, ಕೆ.ಎಸ್.ಲಕ್ಷ್ಮೀಪತಿ ರಾವ್ ಮಾಡೂರು, ಕೆ.ರಮಾಕಾಂತ ಕುಂಬಳೆ, ಎ.ಲಿಂಗಪ್ಪಯ್ಯ ಜಾಲುಮನೆ ಮೊದಲಾದವರು ಉಪಸ್ಥಿತರಿದ್ದರು.
ಶಿವರಾಮ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಮೌನೀಶ್ ಪುಜೂರು ಪಿ. ಸ್ವಾಗತಿಸಿ, ಕೆ.ಜಗದೀಶ್ ಕೂಡ್ಲು ಮತ್ತು ಕಾವ್ಯ ಕುಶಲ ಕಾರ್ಯಕ್ರಮ ನಿರೂಪಿಸಿದರು. ಜಯ ಪ್ರಕಾಶ್ ಕೆ.ವಿ. ವಂದಿಸಿದರು.
ಕಾರ್ಯಕ್ರಮಕ್ಕೆ ಮುನ್ನ ಮರಕಡ ಶ್ರೀ ಗುರು ಪರಾಶಕ್ತಿ ಮಠದ ಪರಮಪೂಜ್ಯ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.