ಮಂಜೇಶ್ವರ: ವ್ಯಕ್ತಿಯೊಬ್ಬ ಶಕ್ತಿಯಾಗಿ ರೂಪುಗೊಂಡು ಸಮಾಜಮುಖಿ ಮನೋಭಾವದಿಂದ ಸಾರ್ವಕಾಲಿಕ ಮೌಲ್ಯಾಧಾರಿತನಾಗಿ ತನ್ನ ಒಳತೋಟಿಗಳನ್ನು ಅಕ್ಷರ ರೂಪದಲ್ಲಿ ಪಡಿಮೂಡಿಸುವ ಕಾವ್ಯ ಪರಂಪರೆ ಸಮಗ್ರ ಜೀವಕೋಟಿಗಳ ನೆಮ್ಮದಿಗೆ, ಜೀವನ ಸಾರ್ಥಕ್ಯಕ್ಕೆ ಕಾರಣವಾಗುತ್ತದೆ ಎಂದು ಮೀಯಪದವು ಶ್ರೀವಿದ್ಯಾವರ್ಧಕ ವಿದ್ಯಾಸಂಸ್ಥೆಯ ಸಂಚಾಲಕಿ ಪ್ರೇಮಾ ಕೆ.ಭಟ್ ತೊಟ್ಟೆತ್ತೋಡಿ ಅವರು ತಿಳಿಸಿದರು.
ಮೀಯಪದವು ಸಮೀಪದ ಚಿಗುರುಪಾದೆಯ ನಿವೃತ್ತ ಶಿಕ್ಷಕ ಟಿ.ಕೆ.ವೆಂಕಟರಮಣ ಭಟ್ ಅವರು ರಚಿಸಿದ "ಹೊಸ ಚಿಗುರು"ಕವನ ಸಂಕಲನ ಕೃತಿಯನ್ನು ಭಾನುವಾರ ಚಿಗುರುಪಾದೆಯಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಾವ್ಯ ಸೃಷ್ಟಿಯ ಸಿದ್ದಿಯ ಸಾಮಥ್ರ್ಯ ವೃದ್ದಿಸುವಲ್ಲಿ ನಿರಂತರ ಓದು, ಸಂಪರ್ಕ ಮತ್ತು ಅನುಭವಗಳು ಪಕ್ವಗೊಳ್ಳಬೇಕು. ಪಕ್ವತೆಯ ಮೂಲಕ ಮೂಡಿಬರುವ ಸಾಹಿತ್ಯ ಸಾರ್ವಕಾಲಿಕ ಮೌಲ್ಯಯುತವಾಗಿರುತ್ತದೆ. ಭಟ್ ಅವರ ಜೀವನಾನುಭವ ಇಂತಹ ಉತ್ತಮ ಕೃತಿ ರಚನೆಗೆ ಕಾರಣವಾಗಿದೆ ಎಂದು ಅವರು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಆಕಾಶವಾಣಿಯ ನಿವೃತ್ತ ನಿಲಯ ನಿರ್ದೇಶಕ, ಸಾಹಿತಿ-ಸಂಶೋಧಕ ಡಾ.ವಸಂತಕುಮಾರ ಪೆರ್ಲ ಅವರು ಮಾತನಾಡಿ, ಸಾಹಿತ್ಯದ ಅಭಿವ್ಯಕ್ತಿಗೆ ಆರಂಭ ಮತ್ತು ಅಂತ್ಯವೆನ್ನುವುದಿಲ್ಲ. ಅದು ಜೀವನದ ಯಾವ ಕಾಲಘಟ್ಟದಲ್ಲೂ ಹುಟ್ಟಿಕೊಳ್ಳಬಹುದು ಎಂದು ತಿಳಿಸಿದರು. ಹೃದಯ ಗಮ್ಯವಾದ ಕಾವ್ಯ ಒಂದೊಂದು ಓದಿಗೆ ಬಹುಮುಖಿ ಅರ್ಥ ನೀಡುವುದಾದರೆ, ಬುದ್ದಿ ಗಮ್ಯವಾದ ಗದ್ಯ ಒಂದೇ ಅರ್ಥ ವ್ಯಾಪ್ತಿ ಹೊಂದಿದೆ.ಆದ್ದರಿಂದ ಗದ್ಯ ಬಹು ಅರ್ಥ ಕೊಡಬಾರದು, ಪದ್ಯ ಒಂದೇ ಅರ್ಥ ಕೊಡುವುದಾದರೆ ವೈಪಲ್ಯ ಎಂದು ಅವರು ವಿಶ್ಲೇಶಿಸಿದರು. ಕಾವ್ಯವು ಅನುಭವದ ನಿವೇದನೆಯಾಗಿದ್ದು, ಋಷಿಯಾಗಲಾರದವ ಕವಿಯಾಗಲಾರ ಎಂದು ತಿಳಿಸಿದರು. ಕಾವ್ಯ ಪ್ರವೇಶದ ಕಾಲಮಾನದ ಪ್ರಭಾವವು ಅರ್ಥ ವ್ಯತ್ಯಾಸಗೊಂಡು ವಿಸ್ಕøತವಾಗಿ ಬೆಳೆಯಲು ಕಾರಣವಾಗುತ್ತದೆ ಎಂದು ತಿಳಿಸಿದ ಅವರು ವೈಚಾರಿಕತೆ, ಹೃದಯಗಮ್ಯವಾದ ವಿಚಾರ ವೈವಿಧ್ಯಗಳು ಕಾವ್ಯ ದಲ್ಲಿರಬೇಕು ಎಂದು ತಿಳಿಸಿದರು. ಕಾವ್ಯದ ಓದುವಿಕೆಯಿಂದ ಹುಟ್ಟಿಕೊಳ್ಳುವ ಶಕ್ತಿ ಮಂತ್ರದಂತೆ ಕಾರ್ಣಿಕ ಶಕ್ತಿಯುಳ್ಳವುಗಳಾಗಿದ್ದು, ಅಂತವು ಕವಿ-ಕಾವ್ಯವನ್ನು ಶಾಶ್ವತಗೊಳಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಿವೃತ್ತ ಶಿಕ್ಷಕ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ, ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ, ಸಾಹಿತಿ ಸಿ.ಎಚ್.ಗೋಪಾಲಕೃಷ್ಣ ಭಟ್ ಚುಕ್ಕಿನಡ್ಕ, ಸಾಹಿತಿ ಡಾ.ಸುರೇಶ ನೆಬಳಿಕ ಳಿ ಉಪಸ್ಥಿತರಿದ್ದು ಶುಭಹಾರೈಸಿದರು. ಕೃತಿ ಕರ್ತೃ ಟಿ.ಕೆ.ವೆಂಕಟರಮಣ ಭಟ್ ಉಪಸ್ಥಿತರಿದ್ದರು.
ಸಾಹಿತಿ, ಸಂಘಟಕ,ಬರಹಗಾರ ಯೋಗೀಶ್ ರಾವ್ ಚಿಗುರುಪಾದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣಪತಿ ಭಟ್ ಪೆರ್ಮುಖ ಕೃತಿ ಪರಿಚಯ ನೀಡಿ ಮಾತನಾಡಿದರು. ಲಕ್ಷ್ಮೀ ಜಿ.ಭಟ್ ಸ್ವಾಗತಿಸಿ, ಟಿ.ಎಸ್.ಪ್ರಸಾದ್ ವಂದಿಸಿದರು. ರಾಜಾರಾಮ ರಾವ್ ಮೀಯಪದವು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನಡೆದ ಕವಿಗೋಷ್ಠಿಯಲ್ಲಿ ಗುಣಾಜೆ.ರಾಮಚಂದ್ರ ಭಟ್, ಪಂಕಜ ರಾಮ ಭಟ್, ಹರೀಶ್ ಸುಲಾಯ ಒಡ್ಡಂಬೆಟ್ಟು, ಪ್ರಮೀಳಾ ಚುಳ್ಳಿಕ್ಕಾನ, ವಸಂತ ಭಟ್ ತೊಟ್ಟೆತ್ತೋಡಿ, ಪುರುಷೋತ್ತಮ ಭಟ್ ಕೆ, ರತ್ನಾ ಟಿ.ಕೆ.ಭಟ್ ಅಡ್ಯನಡ್ಕ ಪದ್ಮಶ್ರೀ, ಚೇತನಾ ಕುಂಬಳೆ ಅವರು ಸ್ವರಚಿತ ಕವನಗಳನ್ನು ವಾಚಿಸಿದರು. ಬಳಿಕ ನಯನಾ ತಲಂಜೇರಿ ಅವರಿಂದ ವಯೋಲಿನ್ ವಾದನ ಮತ್ತು ಸುಗಮ ಸಂಗೀತ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು.