ನವದೆಹಲಿ: ಏಷ್ಯನ್ ಕ್ರೀಡಾಕೂಟದ ಸ್ವರ್ಣ ಪದಕ ವಿಜೇತ ಅಮಿತ್ ಪಂಗಲ್ ಹಾಗೂ ಪೂಜಾ ರಾಣಿ ಅವರು ಬ್ಯಾಂಕಾಕ್ ನಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದು ಬಂಗಾರದ ಸಾಧನೆ ಮಾಡಿದ್ದಾರೆ.
ಭಾರತದ ಆರು ಬಾಕ್ಸರ್ ಗಳು ಫೈನಲ್ ಗೆ ಅರ್ಹತೆ ಪಡೆದುಕೊಂಡಿದ್ದರು.ಅಮಿತ್ 52 ಕೆ.ಜಿ ಹಾಗೂ ಪೂಜಾ 51 ಕೆ.ಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ಸಿಮರ್ನ್ ಜೀತ್ ಕೌರ್ (64 ಕೆ.ಜಿ), ರಾಷ್ಟ್ರೀಯ ಚಾಂಪಿಯನ್ ದೀಪಕ್ ಸಿಂಗ್ (49 ಕೆ.ಜಿ), ಕವೀಂದ್ರ ಸಿಂಗ್ ಬಿಷ್ಟ (56 ಕೆ.ಜಿ) ಹಾಗೂ ಆಶೀಶ್ ಕುಮಾರ್ (75 ಕೆ.ಜಿ) ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ನಿರಾಸೆ ಅನುಭವಿಸಿ ಬೆಳ್ಳಿ ತಮ್ಮದಾಗಿಸಿಕೊಂಡರು.
ಭಾರತ ಈವರೆಗೆ ಟೂರ್ನಿಯಲ್ಲಿ ಎರಡು ಚಿನ್ನ, ನಾಲ್ಕು ಬೆಳ್ಳಿ, ಏಳು ಕಂಚಿನ ಪಕಗಳೊಂದಿಗೆ ಒಟ್ಟು 13 ಪದಕ ಗೆದ್ದಿದೆ. ಪುರುಷರ ವಿಭಾಗದಲ್ಲಿ ಒಂದು ಬಂಗಾರ, ಮೂರು ಬೆಳ್ಳಿ, ಮೂರು ಕಂಚು ಜಯಿಸಿದರೆ, ಮಹಿಳಾ ವಿಭಾಗದಲ್ಲಿ ಒಂದು ಚಿನ್ನ, ಒಂದು ಬೆಳ್ಳಿ, ನಾಲ್ಕು ಕಂಚು ಪಡೆದಿದೆ. ಪುರುಷ ವಿಭಾಗದಲ್ಲಿ ಬಾಕ್ಸರ್ ಗಳು ದಶಕದ ಸಾಧನೆ ಅಳಿಸಿ ಹಾಕಿದ್ದಾರೆ. 2009ರಲ್ಲಿ ಭಾರತೀಯ ಬಾಕ್ಸರ್ ಗಳು ಒಂದು ಚಿನ್ನ, ಎರಡು ಬೆಳ್ಳಿ, ನಾಲ್ಕು ಕಂಚಿನ ಪದಕ ಗೆದ್ದಿದ್ದರು.
ಕಳೆದ ವರ್ಷ ಅಮಿತ್ ಪಂಗಲ್ ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಕೊರಿಯಾದ ಕಿಮ್ ಇಂಕ್ಯೂ ಅವರನ್ನು ಮಣಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು. ಇದರೊಂದಿಗೆ ಅವರು ಆ ವರ್ಷದಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದರು.
23ರ ಪ್ರಾಯದ ಅಮಿತ್ ಪಂಗಲ್ ಅವರು 49 ಕೆ.ಜಿ ಸ್ಪರ್ಧೆಯಿಂದ ಇದೇ ಮೊದಲ ಬಾರಿಗೆ 52 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿ ಅಂದುಕೊಂಡಂತೆ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಇದಕ್ಕೂ ಮೊದಲು ಅವರು ಕಳೆದ ಫೆಬ್ರವರಿಯಲ್ಲಿ ಸ್ಟ್ರಾಂಡ್ಜಾ ಮೆಮೋರಿಯಲ್ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸಿದ್ದರು.