ಭೂಪಾಲ್ : ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ ಸತ್ತಿದ್ದು, ನನ್ನ ಶಾಪದಿಂದ ಎಂದು ಹೇಳಿ ವಿವಾದಕ್ಕೀಡಾಗಿದ್ದ ಬಿಜೆಪಿ ಮುಖಂಡೆ ಸಾಧ್ವಿ ಪ್ರಗ್ಯಾ ಠಾಕೂರ್ ಕ್ಷಮೆಯಾಚಿಸಿದ್ದಾರೆ.
ನನ್ನ ಹೇಳಿಕೆಯಿಂದಾಗಿ ದೇಶದ ಶತ್ರುಗಳು ಲಾಭ ಪಡೆಯುತ್ತಿದ್ದಾರೆ. ಹಾಗಾಗಿ ನಾನು ನನ್ನ ಹೇಳಿಕೆಯನ್ನು ವಾಪಸ್ ಪಡೆದು ಕ್ಷಮೆ ಕೇಳುತ್ತಿದ್ದೇನೆ. ಅದು ನನ್ನ ವೈಯಕ್ತಿಕ ನೋವು ಆಗಿತ್ತು ಎಂದು ಸಾದ್ವಿ ಪ್ರಗ್ಯಾ ಹೇಳಿದ್ದಾರೆ. ಹೇಮಂತ್ ಕರ್ಕರೆ ಶತ್ರುರಾಷ್ಟ್ರದವರ ಗುಂಡಿಗೆ ಬಲಿಯಾದವರು. ಅವರು ಖಂಡಿತಾ ಹುತಾತ್ಮರು ಎಂದು ಸಾಧ್ವಿ ಹೇಳಿದ್ದಾರೆ.
ಮಧ್ಯಪ್ರದೇಶ ಭೂಪಾಲ್ ನಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಸಾಧ್ವಿ ಪ್ರಗ್ಯಾ ಚುನಾವಣಾ ಪ್ರಚಾರದ ವೇಳೆ , ಉಗ್ರ ನಿಗ್ರಹ ದಳದ ಮುಖ್ಯಸ್ಥ ಕರ್ಕರೆಯಲ್ಲಿ , ನನ್ನ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲದಿದ್ದರೆ ಬಿಟ್ಟು ಬಿಡಿ ಎಂದು ಮನವಿ ಮಾಡಿಕೊಂಡಿದ್ದೆ. ಅದಕ್ಕೊಪ್ಪದ ಅವರು, ಸಾಕ್ಷ್ಯವನ್ನು ನಾನು ತರುತ್ತೇನೆ.ಆದರೆ, ನಿಮ್ಮನ್ನು ಮಾತ್ರ ಹೋಗಲು ಬಿಡುವುದಿಲ್ಲ ಎಂದಿದ್ದರು. ಅದಕ್ಕೆ ನಾನು ನೀನು ನಾಶವಾಗಿ ಹೋಗುತ್ತೀಯ ಎಂದು ಶಾಪ ನೀಡಿದ್ದೆ. ಹೀಗಾಗಿ ಅವರ ಸಾವಾಯಿತು ಎಂದು ಹೇಳಿಕೆ ನೀಡಿದ್ದರು.
2008ರ ನವೆಂಬರ್ 26 ರಂದು ನಡೆದ ಮುಂಬೈ ಭಯೋತ್ಪಾದನಾ ದಾಳಿ ಸಂದರ್ಭದಲ್ಲಿ ಮತ್ತಿಬ್ಬರು ಅಧಿಕಾರಿಗಳೊಂದಿಗೆ ಕರ್ಕರೆ ಹುತಾತ್ಮರಾಗಿದ್ದರು.