ಮಂಗಳೂರು: ಇತಿಹಾಸ ಪ್ರಸಿದ್ಧ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಳದ ಜಾತ್ರಾ ಮಹೋತ್ಸವ ವೇಳೆ ನಡೆಯುವ ಸಂಪ್ರದಾಯವೊಂದು ಮೈ ಜುಮ್ಮೆನಿಸುತ್ತದೆ. ತಾಳೆಯ ಗರಿಯನ್ನು ಸುತ್ತಿ ಬೆಂಕಿಯನ್ನು ಹೊತ್ತಿಸಿ ಅದನ್ನು ಭಕ್ತರು ಒಬ್ಬರ ಮೇಲೊಬ್ಬರು ಎಸೆಯುತ್ತಾರೆ.
ತುಳುನಾಡಿನ ವಿಶೇಷ ಸಂಪ್ರದಾಯಾನುಸಾರ ಶ್ರೀಕ್ಷೇತ್ರದ ಜಾತ್ರಾ ಸಂದರ್ಭ ಇಂತಹ ಆಚರಣೆ ಚಾಲ್ತಿಯಲ್ಲಿದೆ. ಶತಶತಮಾನಗಳಿಂದಲೂ ಈ ಆಚರಣೆ ನಡೆದು ಬಂದಿದ್ದು, ಅಸುರ ಅರುಣಾಸುರನನ್ನು ಸಂಹರಿಸಿದ ದೇವಿ ವಿಜಯಿಯಾಗಿ ಬರುವ ವೇಳೆ ಈ ರೀತಿ ಬೆಂಕಿಯಿಂದ ಸ್ವಾಗತ ಕೋರಲಾಗುತಿತ್ತು ಎಂಬ ಪ್ರತೀತಿ ಇದೆ.
ಇತಿಹಾಸದಲ್ಲಿ ಪ್ರಾಚೀನ ಕಾಲದಿಂದಲೂ ನಡೆದು ಬಂದಿರುವ ವಿಶೇಷವಾದ ನಂಬಿಕೆ ಹಾಗೂ ಆಚರಣೆ ಇದಾಗಿದ್ದು, ಈ ವೇಳೆ ಭಕ್ತರ ಮೈ ಮೇಲೆ ಕೇವಲ ಶಾಲು ಹಾಗೂ ಧೋತಿಯನ್ನು ಮಾತ್ರ ಧರಿಸಿರುತ್ತಾರೆ. ಹಾಗಿದ್ದರೂ ಈವರೆಗೂ ತೋಟೆದಾರಗದಲ್ಲಿ ಬೆಂಕಿ ಅನಾಹುತ, ಭಕ್ತಾಧಿಗಳ ಮೈ ಮೇಲೆ ಗಾಯಗಳುಂಟಾದ ಉದಾಹರಣೆಗಳಿಲ್ಲ.
ತೋಟೆದಾರ ಎಂಬುದು ಅತ್ತೂರು, ಕೊಡೆತ್ತೂರು ಸ್ಥಳೀಯ ಗ್ರಾಮಸ್ಥರಿಂದ ನಡೆಯುವ ವಿಶೇಷ ಸೇವೆಯಾಗಿದೆ. ಇದರಲ್ಲಿ ಭಾಗವಹಿಸುವವರು ವ್ರತದಲ್ಲಿ ಇರುತ್ತಾರೆ. ಮಧು ಮಾಂಸ ಇತ್ಯಾದಿ ವಜ್ರ್ಯ. ನಂದಿನಿ ನದಿಯಲ್ಲಿ ಮುಳುಗಿ ಮೈಗೆ ಗಂಧ ಲೇಪನ ಮಾಡಿ ಭಕ್ತಿಯಿಂದ ಬೆಂಕಿಯ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಾರೆ.
ಈ ವೈಶಿಷ್ಠ್ಯ ಪೂರ್ಣ ಆಚರಣೆಯಲ್ಲಿ ಪಾಲ್ಗೊಳ್ಳಲು ನಡುರಾತ್ರಿಯ ವೇಳೆ ಸಾವಿರಾರು ಸಂಖ್ಯೆಯ ಭಕ್ತರು ನೆರೆಯುತ್ತಾರೆ. 15ರಿಂದ 20 ಮೀಟರ್ ದೂರದಲ್ಲಿ ನಿಂತಿಕೊಳ್ಳುವ ಎರಡು ಗುಂಪುಗಳು ತಾಳೆಯ ಗರಿಯನ್ನು ಸುತ್ತಿ ಬೆಂಕಿಯನ್ನು ಹೊತ್ತಿಸಿ ಅದನ್ನು ಭಕ್ತರು ಒಬ್ಬರ ಮೇಲೊಬ್ಬರು ಎಸೆಯುತ್ತಾರೆ ಎಂದು ಕಟೀಲು ಶ್ರೀಕ್ಷೇತ್ರದ ಪ್ರಮುಖರು ತಿಳಿಸುತ್ತಾರೆ.