ಬದಿಯಡ್ಕ: ಕಲ್ಲಕಟ್ಟದ ಮಹಿಳಾ ಸಮಾಜ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಈ ಸಂದರ್ಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯಿನಿ ಹಾಗೂ ಮಹಿಳಾ ಸಂಘದ ಕಾರ್ಯದರ್ಶಿಯಾಗಿ 44 ವರ್ಷಗಳ ಕಾಲ ಸೇವೆ ಸಲ್ಲಿಸಿದ ವಿಜಯಲಕ್ಷ್ಮಿ ಪಿ.ಚಿತ್ತಾರಿ ಹಾಗೂ 2003-04 ನೇ ವರ್ಷದಲ್ಲಿ ಉತ್ತಮ ಅಂಗನವಾಡಿ ಅಧ್ಯಾಪಿಕೆಯಾಗಿ ಕೇರಳ ರಾಜ್ಯ ಪ್ರಶಸ್ತಿ, 2019 ಮಾರ್ಚ್ 8 ರಂದು ಅತ್ಯುತ್ತಮ ಅಧ್ಯಾಪಿಕೆ ಪ್ರಶಸ್ತಿ ಪಡೆದ ಕಲ್ಲಕಟ್ಟ ಅಂಗನವಾಡಿ ಅಧ್ಯಾಪಕಿ ಜಯಶ್ರೀ ಎ. ಅವರನ್ನು ಮಹಿಳಾ ಸಮಾಜ ವತಿಯಿಂದ ಶ್ರೀ ನಿಲಯದ ಶಾರದಮ್ಮ ಅವರು ಶಾಲು ಹೊದಿಸಿ ಸಮ್ಮಾನಿಸಿದರು.
ಅಂಗನವಾಡಿ ಅಧಿಕಾರಿ ನಿಶಾ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸಲಹೆಗಾರರಾದ ಪ್ರೀತಿ ಅವರು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ಕುರಿತಾಗಿ ಮಹಿಳೆಯರಿಗೆ ಮಾಹಿತಿ ನೀಡಿದರು. ಮಹಿಳಾ ಸಮಾಜ ಕಾರ್ಯದರ್ಶಿ ವಿಜಯಲಕ್ಷ್ಮಿ ಅವರು ವಾರ್ಷಿಕ ವರದಿಯನ್ನು ಮಂಡಿಸಿದರು. ರಮ್ಯಶ್ರೀ ಪ್ರಾರ್ಥನೆ ಹಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಅಂಗನವಾಡಿ ಪುಟಾಣಿಗಳಿಗೆ ಮಹಿಳಾ ಸಮಾಜದ ವತಿಯಿಂದ ಬಹುಮಾನಗಳನ್ನು ವಿತರಿಸಿದರು.
ಪೂರ್ಣಿಮ ಮತ್ತು ಗುಣಶೀಲ ಅವರು ಅಭಿನಂದನಾ ಪತ್ರವನ್ನು ವಾಚಿಸಿದರು. ಅಧ್ಯಾಪಕಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.