ಬದಿಯಡ್ಕ: ಬದುಕಿನ ಸಂಕೀರ್ಣ ಚೌಕಟ್ಟುಗಳನ್ನು ಪ್ರತಿಬಿಂಬಿಸುವ, ಸವಾಲು-ಸಂಘರ್ಷಗಳನ್ನು ಶ್ರದ್ದೆಯ ಸಾಧನೆಯ ಮೂಲಕ ಪರಿಹರಿಸುವ ಅನುಭವ ಜನ್ಯ ಕಥೆಗಳು ವ್ಯಕ್ತಿಯನ್ನು ಬದಲಾಯಿಸುವ ಶಕ್ತಿಹೊಂದಿದೆ. ಧನಾತ್ಮಕ, ನಂಬಿಕೆ, ಆಚರಣೆಗಳ ಪರಿಚಯದ ಸಾಹಿತ್ಯ ಕೃತಿಗಳು ಕಾಳಘಟ್ಟದ ವಸ್ತುಸ್ಥಿತಿಯ ಪ್ರತಿಬಿಂಬಗಳಾಗಿವೆ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ತಿಳಿಸಿದರು.
ಉಡುಪಮೂಲೆಯ ಭೂಮಿಕಾ ಪ್ರತಿಷ್ಠಾನದ ನಿರ್ದೇಶಕಿ ವಿದುಷಿಃ ಅನುಪಮಾ ರಾಘವೇಂದ್ರ ಅವರ ನೂತನ ಕೃತಿ "ತಲ್ಲಣಗಳ ಪಲ್ಲವಿ" ಕಥಾ ಸಂಕಲನವನ್ನು ಬುಧವಾರ ಸಂಜೆ ಶ್ರೀಮಠದ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನೃತ್ಯ ವಿದುಷಿಃಯಾಗಿರುವ ಅನುಪಮಾ ರಾಘವೇಂದ್ರ ಅವರು ಶ್ರೀಮಠದ ಶಿಷ್ಯೆಯಾಗಿದ್ದು ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡು ಅಮೂಲ್ಯ ಕೊಡುಗೆಗಳನ್ನು ನೀಡುತ್ತಿದ್ದಾರೆ ಎಂದು ತಿಳಿಸಿದ ಶ್ರೀಗಳು ಇನ್ನಷ್ಟು ಕೃತಿಗಳು ಸಾರಸ್ವತ ಲೋಕಕ್ಕೆ ಕಾಣ್ಕೆಯಾಗಿ ಲಭಿಸಲಿ ಎಮದು ಶುಭಹಾರೈಸಿದರು.
ಸಮಾರಂಭದಲ್ಲಿ ಕೃತಿಯ ಬಗ್ಗೆ ಅವಲೀಕನ ನಡೆಸಿದ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಅವರು ಮಾತನಾಡಿ, ಜಾಗತೀಕರಣದ ಪ್ರಭಾವ ವರ್ತಮಾನದ ಸಾಹಿತ್ಯ ವಲಯದಲ್ಲೂ ಅಚ್ಚೊತ್ತಿದೆ. ಕುಟುಂಬ, ಮನುಷ್ಯ ಸಂಬಂಧಗಳ ಮೇಲೆ ಪ್ರಭಾವ ಬೀರುವ ಸಾಹಿತ್ಯ ಕೃತಿಗಳು ಮೆಚ್ಚುಗೆಗೆ ಒಳಗಾಗುತ್ತದೆ ಎಂದು ತಿಳಿಸಿದರು. ಮಾನವೀಯ ನೆಲೆ-ಸೆಲೆಗಳಿಂದ ಕೂಡಿರುವ ಕಥಾ ಸಂಕಲನ ಓದುಗರನ್ನು ತಟ್ಟುತ್ತದೆ ಎಂದು ತಿಳಿಸಿದರು.
ಕೃತಿಕರ್ತೃ ವಿದುಷಿಃ ಅನುಪಮಾ ರಾಘವೇಂದ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ ವಂದಿಸಿದರು. ರಾಘವೇಂದ್ರ ಉಡುಪಮೂಲೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಭೂಮಿಕಾ ಪ್ರತಿಷ್ಠಾನ ಉಡುಪಮೂಲೆ ಇಲ್ಲಿಯ ವಿದ್ಯಾರ್ಥಿಗಳ "ನೃತ್ಯ ಸಿಂಚನ" ಹಾಗೂ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿ ಎಡನೀರು ಅವರಿಂದ "ಕೀಚಕ ವಧೆ-ವೀರ ಅಭಿಮನ್ಯು" ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.