ಕುಂಬಳೆ: ಹೆಚ್ಚುತ್ತಿರುವ ಬಿಸಿಲಿನ ಬೇಗೆಯಿಂದ ಕಂಗಾಲಾಗಿರುವ ಜನತೆ ತಂಪು ಪಾನೀಯದೆಡೆಗೆ ಆಕರ್ಷಿತರಾಗುತ್ತಿದ್ದಾರೆ. ಮಧ್ಯಾಹ್ನದ ಸುಡು ಬಿಸಿಲಿನ ಬೇಗೆ ಹೆಚ್ಚುತ್ತಿದ್ದಂತೆ ಜನರು ಎಳನೀರು, ಕಲ್ಲಂಗಡಿ ಸಹಿತ ಹಣ್ಣುಗಳ ರಸದ ತಂಪುಪಾನೀಯಗಳತ್ತ ಜನರು ಮುಖಮಾಡುತ್ತಿದ್ದಾರೆ.
ಬೇಸಿಗೆಯಲ್ಲಿ ಭಾರಿ ಪ್ರಮಾಣದಲ್ಲಿ ಬಿಕರಿಯಾಗುತ್ತಿರುವ ಕಲ್ಲಂಗಡಿ ಹಣ್ಣಿಗೆ ಜನತೆ ಮುಗಿ ಬೀಳುತ್ತಿದ್ದಾರೆ. ಕರ್ನಾಟಕ, ತಮಿಳ್ನಾಡಿನಿಂದ ಭಾರಿ ಪ್ರಮಾಣದಲ್ಲಿ ಕಲ್ಲಂಗಡಿ ಹಣ್ಣನ್ನು ಕಾಸರಗೋಡಿಗೆ ತಂದು ಮಾರಾಟ ಮಾಡಲಾಗುತ್ತಿದೆ. ಕಿಲೋ ಒಂದಕ್ಕೆ 25 ರಿಂದ 30ರೂ.ವರೆಗಿದ್ದ ಕಲ್ಲಂಗಡಿ ಹಣ್ಣಿನ ಬೆಲೆ ಇದೀಗ 30ರಿಂದ 35ಕ್ಕೇರಿದೆ.
ಬಿಸಿಲಿನ ತಾಪಕ್ಕೆ ಶರೀರದಲ್ಲಿ ನೀರಿನಂಶ ಕಡಿಮೆಯಾಗುತ್ತಿದ್ದು, ಕಲ್ಲಂಗಡಿ ಸೇವನೆಯಿಂದ ದೇಹದಲ್ಲಿ ನೀರಿನಂಶ ಹೆಚ್ಚಲು ಕಾರಣವಾಗುತ್ತಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ. ತಂಪು ಪಾನೀಯ ಅಂಗಡಿಗಳಲ್ಲಿ ತಣ್ಣಗಿನ ನಾನಾ ರೀತಿಯ ಪಾನೀಯಗಳು ಲಭ್ಯವಾಗುತ್ತಿದ್ದರೂ, ಬೇಸಿಗೆಯಲ್ಲಿ ಎಳನೀರಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ತೆಂಗಿನ ಕಾಯಿ ಧಾರಣೆಯಲ್ಲಿ ಗಣನೀಯ ಹೆಚ್ಚಳವುಂಟಾಗಿರುವ ಹಿನ್ನೆಲೆಯಲ್ಲಿ ಎಳನೀರಿಗೂ ಈ ಬಾರಿ ಬೆಲೆ ಹೆಚ್ಚಾಗಿದೆ. ಅಲ್ಲದೆ, ತೆಂಗು ಕೃಷಿಕರು ಎಳನೀರು ಮಾರಾಟಕ್ಕೆ ಹೆಚ್ಚಿನ ಆಸಕ್ತಿ ತೋರದಿರುವುದರಿಂದ ಕಾಸರಗೋಡಿಗೆ ಅನ್ಯ ರಾಜ್ಯಗಳಿಂದ ಎಳನೀರು ತರಿಸಿಕೊಳ್ಳಬೇಕಾಗುತ್ತಿದೆ. ಮಂಡ್ಯ, ಮೈಸೂರು, ಶಿವಮೊಗ್ಗದಿಂದ ಭಾರಿ ಪ್ರಮಾಣದಲ್ಲಿ ಕಾಸರಗೋಡು ಜಿಲ್ಲೆಗೆ ಎಳನೀರು ಆಗಮಿಸುತ್ತಿದೆ. 35 ರಿಂದ 40 ರೂ.ಗಳ ಬೆಲೆಗೆ ಎಳನೀರು ಮಾರಾಟವಾಗುತ್ತಿದೆ. ಬಡ-ಮಧ್ಯಮ ವರ್ಗದವರಿಗೆ ಪ್ರಸ್ತುತ ಎಳನೀರು ಕೊಳ್ಳುವಿಕೆ ಗಗನ ಕುಸುಮವಾಗಿದೆ.
ಜೊತೆಗೆ ಜಿಲ್ಲೆಯಾದ್ಯಂತ ರಸ್ತೆಬದಿ ಅಲ್ಲಲ್ಲಿ ಕಬ್ಬಿನ ಹಾಲಿನ ಮಾರಾಟವೂ ಜೋರಾಗಿದೆ. ಸೀಮೆ ಎಣ್ಣೆ ಬಳಸಿ ಚಾಲನೆಗೊಳ್ಳುವ ವಿಲ್ಲಿಯರ್ಸ್ ಪಂಪ್ ಸೆಟ್ ಗಳನ್ನು ಬಳಸಿ ಕಬ್ಬಿನ ಹಾಲಿನ ಯಂತ್ರ ಕಾರ್ಯಾಚರಿಸುತ್ತಿದ್ದು, ಪ್ರಧಾನ ರಸ್ತೆಗಳ ಅಲ್ಲಲ್ಲಿ ನೆರಳಿರುವ ಪರಿಸರದಲ್ಲಿ ಕಬ್ಬಿನ ಹಾಲು ವಿತರಣೆ ನಡೆಯುತ್ತಿದೆ. ಅನ್ಯ ರಾಜ್ಯಗಳಿಂದ ತರಿಸಲಾಗುವ ಕಬ್ಬಿನಿಂದ ತೆರೆಯುವ ಹಾಲಿಗೆ ಲೋಟವೊಂದಕ್ಕೆ 15 ರಿಂದ 20 ರೂ.ಗಳ ಬೆಲೆ ನಿಗದಿಪಡಿಸಲಾಗಿದೆ.
ಜೊತೆಗೆ ಬೇಸಿಗೆ ಕಾಲದಲ್ಲಿ ರಸ್ತೆಬದಿ ಅಲ್ಲಲ್ಲಿ ಮುಸುಂಬಿ ಜ್ಯೂಸ್ ಮಾರಾಟವೂ ನಡೆಯುತ್ತಿದೆ. ಉತ್ತರ ಭಾರತದ ನಿವಾಸಿಗಳು ರಸ್ತೆಬದಿ ಅಳವಡಿಸಿಕೊಂಡಿರುವ ಸಣ್ಣ ಯಂತ್ರಗಳಲ್ಲಿ ಮುಸುಂಬಿಯಿಂದ ತಯಾರಿಸುವ ಪಾನೀಯಕ್ಕೆ ಹೆಚ್ಚಿನ ಬೇಡಿಕೆ ಕಂಡು ಬರುತ್ತಿದೆ. ಅಲ್ಲದೆ ಬಾಳೆಹಣ್ಣು, ಅವಲಕ್ಕಿ ಸಹಿತ ವಿವಿಧ ವಸ್ತುಗಳ ಮಿಶ್ರಣದ "ಅವಿಲ್ ಮಿಲ್ಕ್', ಕಲ್ಲಂಗಡಿ ಹಣ್ಣಿನ ಜ್ಯೂಸ್, ಲಿಂಬೆಹಣ್ಣಿನ ಶರ್ಬತ್ ಸಹಿತ ತಂಪು ಪಾನೀಯಗಳಿಗೆ ಬೇಡಿಕೆ ಕುದುರಿದೆ.