ಗ್ರಾಮಾಭಿವೃದ್ದಿ ಯೋಜನೆಯಿಂದ ಗಡಿನಾಡಿಗೆ ಹೊಸ ಕೊಡುಗೆ- ನಮ್ಮ ಊರು ನಮ್ಮ ಕೆರೆ ಯೋಜನೆಯಡಿಯಲ್ಲಿ ಅರಿಂಗುಳಿ ಕೆರೆ ನಿರ್ಮಾಣಕ್ಕೆ ಗುದ್ದಲಿ ಪೂಜೆ
0
ಏಪ್ರಿಲ್ 01, 2019
ಉಪ್ಪಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಇದರ ವತಿಯಿಂದ ವರ್ಕಾಡಿ ಗ್ರಾಮ ಪಂಚಾಯತಿ ಇದರ ಸಹಕಾರದೊಂದಿಗೆ ನಮ್ಮ ಊರು ನಮ್ಮ ಕೆರೆ ಎಂಬ ಯೋಜನೆಯಡಿಯಲ್ಲಿ ಪೈವಳಿಕೆ ವಲಯದ ಸುಂಕದಕಟ್ಟೆ ಅರಿಂಗುಳಿ ಮದಕದ ಕೆರೆ ಅಭಿವೃದ್ಧಿಗೆ ಗುದ್ದಲಿ ಪೂಜೆಯನ್ನು ತಂತ್ರಿವರ್ಯ ರಾಜೇಶ್ ತಾಳಿತ್ತಾಯ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆಸಲಾಯಿತು.
ಅಂತರ್ಜಲ ಮಟ್ಟದ ಕುಸಿತ ಹಾಗೂ ಪ್ರಕೃತಿಯ ಸಂರಕ್ಷಣೆ ಉದ್ದೇಶವನ್ನಿಟ್ಟುಕೊಂಡು ಕೆರೆಗಳನ್ನು ಅಭಿವೃದ್ಧಿ ಮಾಡುವ ಸಲುವಾಗಿ ನಮ್ಮ ಕೆರೆ ನಮ್ಮ ಊರು ಎಂಬ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಆರಂಭಿಸಿದ್ದು, ಅರಿಂಗುಳ ಮದಕದ ಅಭಿವೃದ್ಧಿಗೆ ರೂ.5 ಲಕ್ಷವನ್ನು ಈಗಾಗಲೇ ಮಂಜೂರು ಮಾಡಲಾಗಿದೆ.
ಕೇರಳ ರಾಜ್ಯದಲ್ಲಿ ಅರಿಂಗಳದ ಕೆರೆ ಪುನರ್ ನಿರ್ಮಾಣ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಥಮ ಕಾರ್ಯಕ್ರಮವಾಗಿದ್ದು, ವರ್ಕಾಡಿ ಗ್ರಾಮ ಪಂಚಾಯತಿನ ಅಧ್ಯಕ್ಷ ಅಬ್ದುಲ್ ಮಜೀದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಸಿ.ಅಶ್ವಥ್ ಪೂಜಾರಿ ಲಾಲ್‍ಬಾಘ್, ಜಿಲ್ಲಾ ಪಂಚಾಯತಿ ಸದಸ್ಯ ಹರ್ಷಾದ್ ವರ್ಕಾಡಿ, ಬ್ಲಾಕ್ ಪಂಚಾಯತಿ ಸದಸ್ಯೆ ಮಮತಾ ದಿವಾಕರ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ತಚ್ಚಿರೆ, ವರ್ಕಾಡಿ ಪಂ.ಸದಸ್ಯರಾದ ಹೇಮಲತಾ ಸುಧಾಕರ, ಜನಜಾಗೃತಿ ವೇದಿಕೆ ಸದಸ್ಯರಾದ ಶಂಕರ ಭಂಡಾರಿ, ವಸಂತ, ಸಂತೋಷ, ರಾಮಕೃಷ್ಣ ಸಂತಡ್ಕ ಮೊದಲಾದವರು ಭಾಗವಹಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾ ಸ್ವಾಗತಿಸಿ, ಸುಧಾಕರ ವರ್ಕಾಡಿ ವಂದಿಸಿದರು. ಯೋಜನೆಯ ಪೈವಳಿಕೆ ವಲಯದ ಮೇಲ್ವಿಚಾರಕ ವಿಶ್ವನಾಥ ಗೌಡ ಕಾರ್ಯಕ್ರಮ ನಿರ್ವಹಿಸಿದರು.