ಕಾಸರಗೋಡು: ಜಿಲ್ಲಾ ಶಿಶು ಸಂರಕ್ಷಣೆ ಯೂನಿಟ್ ಮತ್ತು ಚೈಲ್ಡ್ ವೆಲ್ ಫೇರ್ ಸಮಿತಿ ಜಂಟಿ ವತಿಯಿಂದ ಅನಾಥಾಲಯಗಳಲ್ಲಿರುವ ಮಕ್ಕಳಿಗೆ ರಜಾದಿನಗಳಲ್ಲಿ ಮನೆಯಲ್ಲಿ ವಸತಿ ಹೂಡುವಂತೆ ಮಾಡುವ ವೊಕೇಶನಲ್ ಫೋಸ್ಟರ್ ಕೇರ್ ಯೋಜನೆ ಅಂಗವಾಗಿ ಜಿಲ್ಲೆಯಲ್ಲಿ 5 ಮಕ್ಕಳ ಹೊಣೆಯನ್ನು ಬೇರೆ ಬೇರೆ ಕುಟುಂಬಗಳು ವಹಿಸಿಕೊಂಡಿವೆ.
ಸ್ವಂತ ಕುಟುಂಬದಲ್ಲಿ ಬೆಳೆಯುವ ಪರಿಸ್ಥಿಯಿಲ್ಲದ ಮಕ್ಕಳನ್ನು ರಜಾದಿನಗಳಲ್ಲಿ ಬೇರೆ ಮನೆಯಲ್ಲಿ ಕುಟುಂಬವೊಂದರ ರಕ್ಷಣೆಯಲ್ಲಿ ಸುರಕ್ಷಿತವಾಗಿ ಇರುವಂತೆ ಮಾಡಲಾಗುವ ಯೋಜನೆ ಇದಾಗಿದೆ. ವೊಕೇಶನಲ್ ಫೋಸ್ಟರ್ ಕೇರ್ ಯೋಜನೆ ಪ್ರಕಾರ ಕಾಸರಗೋಡು ಚೈಲ್ಡ್ ವೆಲ್ ಫೇರ್ ಸಮಿತಿಯ ಸಂರಕ್ಷಣೆಯಲ್ಲಿ ಸರಕಾರಿ ಸ್ಪೆಷ್ಯಲ್ ಚಿಲ್ಡ್ರನ್ ಹೋಂ ಕಾಸರಗೋಡು, ಅಭಯ ಶೆಲ್ಟರ್ ಹೋಂ ಚೆರ್ಕಳ, ಶ್ರೀಮಾತಾ ಬಾಲಿಕಾಶ್ರಮ, ವರ್ಕಾಡಿ ಸಾನ್ ಜೋಸ್ , ಬಾಲಭವನ ಕರಿವೇಡಗಂ ಮೊದಲಾದ ಸಂಸ್ಥೆಗಳ ಮಕ್ಕಳನ್ನು ರಜಾದಿನಗಳಲ್ಲಿ ಕೆಲವು ಕುಟುಂಬಗಳ ಸುಪರ್ದಿಗೆ ನೀಡಲಾಗಿದೆ.
ಸರಕಾರಿ ಚಿಲ್ಡ್ರನ್ ಹೋಂ ನಲ್ಲಿ ಈ ಸಂಬಂಧ ನಡೆದ ಸಮಾರಂಭದಲ್ಲಿ ಕಾಸರಗೋಡು ಚೈಲ್ಡ್ ವೆಲ್ ಫೇರ್ ಸಮಿತಿ ಅಧ್ಯಕ್ಷೆ,ನ್ಯಾಯವಾದಿ ಶ್ಯಾಮಲಾದೇವಿ ಉದ್ಘಾಟಿಸಿದರು. ಜಿಲ್ಲಾ ಮಟ್ಟದ ಜೆ.ಜೆ.ಇನ್ಸ್ ಪೆಕ್ಷನ್ ಸಮಿತಿ ಅಧ್ಯಕ್ಷೆ ನ್ಯಾಯವಾದಿ ಮಣಿಯಮ್ಮ ಅಧ್ಯಕ್ಷತೆ ವಹಿಸಿದ್ದರು. ಚೈಲ್ಡ್ ವೆಲ್ ಫೇರ್ ಸಮಿತಿ ಸದಸ್ಯರಾದ ನ್ಯಾಯವಾದಿ ಶಿವಪ್ರಸಾದ್, ನ್ಯಾಯವಾದಿ ಪ್ರಿಯ ಎ.ಕೆ. ಉಪಸ್ಥಿತರಿದ್ದರು. ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಪಿ.ಬಿಜು ಸ್ವಾಗತಿಸಿದರು. ಚೈಲ್ಡ್ ವಲ್ ಫೇರ್ ಸಮಿತಿ ಸದಸ್ಯೆ ನ್ಯಾಯವಾದಿ ರಜಿತಾ ವಂದಿಸಿದರು.