ಮಂಜೇಶ್ವರ: ಹೊಸಂಗಡಿ ಸಮೀಪದ ಹೊಸಬೆಟ್ಟುವಿನಲ್ಲಿ ನೂತನವಾಗಿ ನಿರ್ಮಿಸಲಾದ ಜಮ್ಮದಮನೆ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ವಿಶ್ವಹಿಂದೂ ಪರಿಷತ್ತು, ಭಜರಂಗದಳ, ಮಾತೃಶಕ್ತಿ ಇದರ ಸತ್ಸಂಗ ಸಮಿತಿಯ ಆಶ್ರಯದಲ್ಲಿ ನಡೆದ ಮಾತೆಯರಿಗಾಗಿ ವಿಶೇಷ ಭಜನಾ ಸ್ಪರ್ಧೆಯಲ್ಲಿ ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಸುಗಮ ಸಂಗೀತ ವಿಭಾಗದ ವಿದ್ಯಾರ್ಥಿಗಳ ಭಜನಾ ತಂಡವು ಪ್ರಥಮ ಬಹುಮಾನ ಗಳಿಸಿದೆ. ಬಹುಮಾನವು ನಗದು, ಫಲಕ ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿದ್ದು, ಶ್ರೀಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಒಡಿಯೂರು ಶ್ರೀಗುರುದೇವಾನಂದ ಶ್ರೀಗಳು ವಿತರಿಸಿ ಅನುಗ್ರಹಿಸಿದರು. ಒಟ್ಟು 16 ತಂಡಗಳು ಭಾಗವಹಿಸಿದ್ದವು.
ರಂಗಸಿರಿಯ ಸುಗಮಸಂಗೀತ ಶಿಕ್ಷಕಿ ಡಾ.ಸ್ನೇಹಾಪ್ರಕಾಶ್ ಪೆರ್ಮುಖ ಅವರ ಗರಡಿಯಲ್ಲಿ ಪಳಗಿದ ತಂಡವು ಈಗಾಗಲೇ ಹಲವಾರು ಕಡೆಗಳಲ್ಲಿ ಭಜನಾ ಕಾರ್ಯಕ್ರಮವನ್ನು ನೀಡಿ ಜನಮೆಚ್ಚುಗೆ ಪಡೆದಿರುತ್ತದೆ. ವಿದ್ಯಾರ್ಥಿನಿಯರಾದ ಅನ್ವಿತಾ ತಲ್ಪನಾಜೆ, ಸಮನ್ವಿತ ವಳಕುಂಜ, ನವ್ಯಶ್ರೀ ಕನಕಪ್ಪಾಡಿ, ಸುಮೇಧಾ ಅಗಲ್ಪಾಡಿ, ದೀಪ್ತಿ ಏತಡ್ಕ ತಂಡದ ಪ್ರದರ್ಶನವನ್ನು ಅತ್ಯುತ್ತಮವಾಗಿ ನಿರ್ವಹಿಸಿ, ಬಹುಮಾನಗಳಿಸುವಲ್ಲಿ ಯಶಸ್ವಿಯಾದರು. ರಂಗಸಿರಿ ಸಾಂಸ್ಕøತಿಕ ವೇದಿಕೆಯು ವಿದ್ಯಾರ್ಥಿಗಳಿಗೂ ಶಿಕ್ಷಕಿಗೂ ಅಭಿನಂದನೆಗಳನ್ನು ಸಲ್ಲಿಸಿ, ತಂಡವು ಇನ್ನಷ್ಟು ಸಾಧನೆಯನ್ನು ಮಾಡಿ, ಸಂಸ್ಥೆಗೆ ಇನ್ನೂ ಹೆಚ್ಚಿನ ಪ್ರಸಿದ್ಧಿಯನ್ನು ತರುವಂತಾಗಲಿ ಎಂದು ಹಾರೈಸಿದೆ.