ಬದಿಯಡ್ಕ: ವೇದಗಳನ್ನು ಅಭ್ಯಸಿಸಿ, ಅದರಲ್ಲಿನ ವಿಚಾರಗಳನ್ನು ಆಚರಿಸಿ, ಅನುಷ್ಠಾನ ಮಾಡಿದಲ್ಲಿ ನಮ್ಮ ಜನ್ಮವು ಸಾರ್ಥಕವಾಗುತ್ತದೆ ಎಂದು ಹಿರಿಯ ಧಾರ್ಮಿಕ ಮುಂದಾಳು, ವೈದಿಕ ವಿದ್ವಾಂಸ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಅಭಿಪ್ರಾಯಪಟ್ಟರು.
ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಕಾಸರಗೋಡು ಅಂಗಸಂಸ್ಥೆಯ ನೇತೃತ್ವದಲ್ಲಿ ಬೇಳ ಕುಮಾರಮಂಗಲದ ಸುಬ್ರಹ್ಮಣ್ಯ ಸ್ವಾಮೀ ದೇವಾಲಯದಲ್ಲಿ ಶರವಣ ಸೇವಾ ಟ್ರಸ್ಟ್‍ನ ಸಹಯೋಗದೊಂದಿಗೆ ಪ್ರಸ್ತುತ ದೇವಾಯಲದಲ್ಲಿ ಪ್ರಾರಂಭಗೊಂಡ ವಸಂತ ವೇದಪಾಠ ಶಿಬಿರವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
ವೇದಾಧ್ಯನದ ಮೂಲಕ ಧನಾತ್ಮಕ ವ್ಯಕ್ತಿ, ಸಮಾಜ ಸೃಷ್ಟಿಯ ಹೊಣೆ ಯುವ ತಲೆಮಾರಿನ ಕರ್ತವ್ಯವಾಗಿದ್ದು, ಮಂತ್ರಾರ್ಥಗಳ ಜೊತೆಗೆ ಅದು ಪ್ರಕೃತಿಯ ಮೇಲೆ ಬೀರುವ ಸಕಾರಾತ್ಮಕ ಪರಿಣಾಮಗಳ ಬಗ್ಗೆ ಆಸಕ್ತಿ ಬೆಳೆಸಬೇಕು ಎಂದು ಅವರು ಈ ಸಂದರ್ಭ ಕರೆ ನೀಡಿದರು.
ಸಮಾರಂಭದಲ್ಲಿ ಶರವಣ ಸೇವಾ ಟ್ರಸ್ಟ್‍ನ ನಿರ್ದೇಶಕರೂ, ಪ್ರಸ್ತುತ ದೇಗುಲದ ಪ್ರಧಾನ ಅರ್ಚಕರೂ ಆದ ರಾಮಚಂದ್ರ ಅಡಿಗ ಅವರು ಅಧ್ಯಕ್ಷತೆ ವಹಿಸಿದ್ದರು.0 ಕಾರ್ಯಕ್ರಮದಲ್ಲಿ ಕಾಸರಗೋಡು ಅಂಗಸಂಸ್ಥೆಯ ಅಧ್ಯಕ್ಷ ಎಸ್.ಎನ್.ಮಯ್ಯ ಬದಿಯಡ್ಕ, ಶಿಬಿರದ ಅಧ್ಯಾಪಕರಾದ ಶಿವಾನಂದ ಮಯ್ಯ ಐಲ, ಗೋವಿಂದ ಜೋಯಿಸ, ವೆಂಕಟರಾಜ ಕಾರಂತ ಹಾಗು ಗೋಪಾಲಕೃಷ್ಣ ಭಟ್ ಮುಂತಾದವರು ಉಪಸ್ಥಿತರಿದ್ದು, ಶುಭಹಾರೈಸಿದರು.
ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಟುಗಳು ಭಾಗವಹಿಸಿ ಇದರ ಪ್ರಯೋಜನವನ್ನು ಪಡೆಯಬೇಕೆಂದರು. ಶಿಬಿರದ ಸಂಚಾಲಕ ಚಂದ್ರಶೇಖರ್ ರಾವ್ ಏತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಎಂ.ನರಸಿಂಹ ರಾಜ್ ವಂದಿಸಿದರು.