ಕಾಸರಗೋಡು: ರಾಜಕೀಯ ದ್ವೇಷದಿಂದ ಕೇಂದ್ರ ಸರಕಾರದ ಯೋಜನೆಗಳನ್ನು ಜಾರಿಗೊಳಿಸದ ಕೇರಳದ ಎಡರಂಗ ಸರಕಾರ ಕೇರಳೀಯರನ್ನು ವಂಚಿಸುತ್ತಿದೆ ಎಂದು ಕೇಂದ್ರ ಸಮಾಜ ಕ್ಷೇಮ ಖಾತೆ ಸಚಿವ ತಾವರ್‍ಚಂದ್ ಗೆಹ್ಲೋಟ್ ಆರೋಪಿಸಿದರು.
ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಅವರ ಚುನಾವಣೆ ಪ್ರಚಾರ ಸಭೆಯನ್ನು ಮಂಗಳವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ದೇಶಭಕ್ತರು, ದೇಶದ್ರೋಹಿಗಳ ಮಧ್ಯೆ ಸ್ಪರ್ಧೆ ನಡೆಯುತ್ತಿದೆ. ದೇಶ ಸ್ನೇಹಿಗಳಾದ ಎನ್‍ಡಿಎ ಒಂದು ಭಾಗದಲ್ಲಿ, ಉಗ್ರವಾದಿಗಳನ್ನು, ಭ್ರಷ್ಟಾಚಾರಗಳನ್ನು ಬೆಂಬಲಿಸುವವರು ಇನ್ನೊಂದು ಕಡೆಯಲ್ಲಿದ್ದಾರೆ. ರಸ್ತೆ ನಿರ್ಮಾಣಕ್ಕಾಗಿ ಐಐಟಿ ಸೇರಿದಂತೆ ರಾಜ್ಯಕ್ಕೆ ಮಂಜೂರಾದ ಯೋಜನೆಗಳು ರಾಜ್ಯ ಸರಕಾರದ ಉದಾಸೀನತೆಯಿಂದ ಕಾಲಾನುಸಾರ ಪೂರ್ತೀಕರಿಸಲು ಸಾಧ್ಯವಾಗಲಿಲ್ಲ. ನರೇಂದ್ರ ಮೋದಿ ಸರಕಾರ ಅಭಿವೃದ್ಧಿಯಲ್ಲದೆ ಯಾವುದೇ ವಿಧದ ಪಕ್ಷಪಾತ ಧೋರಣೆ ಕಳೆದ ಐದು ವರ್ಷದಲ್ಲಿ ಕೈಗೊಂಡಿಲ್ಲ. ಆರೋಗ್ಯ ರಂಗದ ಆಯುಷ್ಮಾನ್ ಭಾರತ್ ಯೋಜನೆ ಕೇರಳದಲ್ಲಿ ಹೆಸರು ಬದಲಾಯಿಸಿ ರಾಜಕೀಯ ಲಾಭಗಳಿಸಲು ಯತ್ನಿಸುತ್ತಿದೆ. ವಿವಿಧ ಉದ್ಯಮಿಗಳಿಗೆ ಕೇಂದ್ರ ಹಣ ಮಂಜೂರು ಮಾಡಿದರೂ ಅದಕ್ಕಾಗಿ ಸ್ಥಳ ಲಭ್ಯಗೊಳಿಸಲು ರಾಜ್ಯ ಸರಕಾರಕ್ಕೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿಯನ್ನು ಮುಂದುವರಿಸಬೇಕಿದ್ದರೆ ಎನ್‍ಡಿಎ ಮತ್ತೊಮ್ಮೆ ಅಧಿಕಾರಕ್ಕೇರಬೇಕೆಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ವೇಲಾಯುಧನ್, ರಾಜ್ಯ ಸಮಿತಿ ಉಪಾಧ್ಯಕ್ಷೆ ಪ್ರಮೀಳಾ ಸಿ.ನಾೈಕ್, ರಾಜ್ಯ ಸಮಿತಿ ಸದಸ್ಯರಾದ ಪಿ.ಸುರೇಶ್ ಕುಮಾರ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ರಾಷ್ಟ್ರೀಯ ಸಮಿತಿ ಸದಸ್ಯ ಎಂ.ಸಂಜೀವ ಶೆಟ್ಟಿ, ಪಯ್ಯನ್ನೂರು ಶಾಜಿ, ಶಿನೋಜ್ ಸೆಬಾಸ್ಟಿನ್, ಶೈಶಾದ್ ಬಗ್ಸನ್, ಶಶಿಧರ, ಗಣೇಶ್ ಪಾರೆಕಟ್ಟೆ, ಎ.ಟಿ.ವಿಜಯನ್ ಮೊದಲಾದವರು ಉಪಸ್ಥಿತರಿದ್ದರು.