ಮುಳ್ಳೇರಿಯ: ಬಡ ಕುಟುಂಬಗಳಿಗೆ ಐದು ಲಕ್ಷ ರೂ.ವರೆಗೆ ಪ್ರತಿವರ್ಷ ಆರೋಗ್ಯ ವಿಮೆ ಲಭಿಸುವ ಕೇಂದ್ರ ಸರಕಾರದ ಯೋಜನೆಯಾದ ಆಯುಷ್ಮಾನ್ ಭಾರತ್ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಹಿಂದೇಟು ಹಾಕುವ ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಸರಕಾರವು ಜನಸಾಮಾನ್ಯರಿಗೆ ಕ್ಷಮಿಸಲಾರದ ವಂಚನೆ ನಡೆಸುತ್ತಿದೆ ಎಮದು ಕರ್ನಾಟಕ ವಿಧಾನ ಸಭಾ ಪ್ರತಿಪಕ್ಷ ನೇತಾರ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದರು.
ಎನ್ ಡಿ ಎ ಕಾಸರಗೋಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕುಂಟಾರು ರವೀಶ ತಂತ್ರಿ ಅವರ ಉದುಮ ವಿಧಾನ ಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯನ್ನು ಸೋಮವಾರ ಅಡೂರಿನಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೇರಳ ಹಾಗೂ ಕರ್ನಾಟಕದ ಮಂಗಳೂರಿನ ಖಾಸಗೀ ಆಸ್ಪತ್ರೆಗಳ ಲಾಬಿಗೆ ಒಳಗಾಗಿರುವ ಸರಕಾರದ ಭ್ರಷ್ಟ ನೀತಿಯಿಂದ ಬಡ-ಮಧ್ಯಮ ವರ್ಗದ ಜನಸಾಮಾನ್ಯರು ಅಗತ್ಯ ಚಿಕಿತ್ಸೆಗಳಿಗೆ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಐದು ವರ್ಷಗಳಲ್ಲಿ ರಾಷ್ಟ್ರದ ಸುರಕ್ಷಿತತೆ, ಸುಭಿಕ್ಷೆ, ಶಾಂತಿ ವ್ಯವಸ್ಥೆ, ಅಭಿವೃದ್ದಿಗಳಿಗೆ ಗಟ್ಟಿ ನಿರ್ಧಾರದ ಮೂಲಕ ಅತ್ಯಪೂರ್ವ ಯೋಜನೆಗಳನ್ನು ಜಾರಿಗೆ ತಂದಿರುವ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರಕಾರ ಮುಂದಿನ ಚುನಾವಣೆಯಲ್ಲಿ ಗರಿಷ್ಠ ಮತಗಳೊಂದಿಗೆ ಗೆದ್ದುಬರಲಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಸಭೆಯಲ್ಲಿ ಬಿಜೆಪಿ ಉದುಮ ಮಂಡಲಾಧ್ಯಕ್ಷ ಕೆ.ಟಿ.ಪುರುಷೋತ್ತಮನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಪ್ರಮೀಳಾ ಸಿ.ನಾೈಕ್, ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಅಭ್ಯರ್ಥಿ ರವೀಶ ತಂತ್ರಿ ಕುಂಟಾರು, ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ.ವಿ.ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ರಮೇಶ್, ಕಾರ್ಯದರ್ಶಿಗಳಾದ ಬಳಾಲ್ ಕುಂಞÂಕಣ್ಣನ್, ಎನ್ ಡಿ ಎ ಚುನಾವಣಾ ಸಮಿತಿ ಅಧ್ಯಕ್ಷ ಪಿ.ಆರ್.ಸುನಿಲ್, ಕಾಸರಗೋಡು ಮಂಡಲಾಧ್ಯಕ್ಷ ಸುಧಾಮ ಗೋಸಾಡ, ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿಲೀಪ್ ಪಳ್ಳಂಜಿ, ರಾಜೇಶ್ ನಾಯಕ್ ಮೊದಲಾದವರು ಮಾತನಾಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಮಾನಡ್ಕ ಸ್ವಾಗತಿಸಿ, ಬಿ.ಪ್ರದೀಪ್ ಕುಮಾರ್ ವಂದಿಸಿದರು.