HEALTH TIPS

ತುಳುನಾಡ ಇತಿಹಾಸದಲ್ಲಿ `ಸರ್ವಧರ್ಮ ಮಾತೃಸಂಗಮ'ಕ್ಕೆ ಸಾಕ್ಷಿಯಾದ ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿ-ಎಲ್ಲರನ್ನೂ ಒಂದುಗೂಡಿಸುವಲ್ಲಿ ದೈವಾರಾಧನೆ ಮಹತ್ತರ-ಕಸ್ತೂರಿ ಪಂಜ


           ಬದಿಯಡ್ಕ: ತುಳುನಾಡ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಿಂದೂ, ಬೌದ್ಧ, ಸಿಖ್, ಕ್ರಿಶ್ಚಿಯನ್, ಇಸ್ಲಾಮ್ ಹಾಗೂ ಜೈನಧರ್ಮಗಳ ಮಾತೆಯರ ಸಮ್ಮಿಲನದೊಂದಿಗೆ `ಸರ್ವಧರ್ಮ ಮಾತೃಸಂಗಮ' ಕಾರ್ಯಕ್ರಮಕ್ಕೆ ಉಪ್ಲೇರಿ ವಾಂತಿಚ್ಚಾಲು ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ನಟರಾಜ ಸುಧರ್ಮ ವೇದಿಕೆಯು ಶನಿವಾರ ಸಾಕ್ಷಿಯಾಯಿತು.
         ಐದು ವರ್ಷಗಳಿಗೊಮ್ಮೆ ಜರಗುವ ಧರ್ಮಕೋಲೋತ್ಸವ, ಅಷ್ಟೋತ್ತರ ಪಂಚಶತ ಸೀಯಾಳಾಭಿಷೇಕ, ಲೋಕಕಲ್ಯಾಣಾರ್ಥವಾಗಿ ಸಗ್ರಹಮುಖ ಶನೈಶ್ಚರ ಶಾಂತಿ ಮಹಾಯಾಗದ ಸಂದರ್ಭದಲ್ಲಿ ಶನಿವಾರ ಅಪರಾಹ್ನ ಬಪ್ಪನಾಡು ಸಹಕಾರಿ ಬ್ಯಾಂಕ್ ನಿರ್ದೇಶಕಿ ಕಸ್ತೂರಿ ಪಂಜ ದೀಪಪ್ರಜ್ವಲನೆಗೈಯುವ ಮೂಲಕ `ಸರ್ವಧರ್ಮ ಮಾತೃ ಸಂಗಮ' ಉದ್ಘಾಟಿಸಿದರು. ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಯಾವುದೇ ಬೇಧಭಾವವಿಲ್ಲದೆ ಪರಸ್ಪರ ಸಹೋದರ ಭಾವದಿಂದ ಸರ್ವಧರ್ಮಗಳ ಜನರು ಜೀವಿಸುವ ಏಕೈಕ ರಾಷ್ಟ್ರವಾಗಿದೆ ನಮ್ಮ ಭಾರತ ದೇಶ. ಎಲ್ಲ ಧರ್ಮಗಳ ದೈವದೇವರುಗಳ ಸಾನ್ನಿಧ್ಯವಿರುವ ಈ ಭೂಮಿಯಲ್ಲಿ ಜನಿಸಿದ ನಾವು ಧನ್ಯರು. ಪಾವಿತ್ರ್ಯತೆಯನ್ನು ಹೊಂದಿದ ಇಂತಹ ಪುಣ್ಯಭೂಮಿಯಲ್ಲಿ ಎಲ್ಲರನ್ನು ಒಂದುಗೂಡಿಸುವಲ್ಲಿ ಈ ಕಾರ್ಯಕ್ರಮವು ಗಮನಾರ್ಹವಾಗಿದೆ. ಒಂದೇ ತಾಯಿಯ ಮಕ್ಕಳಂತೆ ಪರಸ್ಪರ ಸಹೋದರತೆಯಿಂದ ಎಲ್ಲ ಧರ್ಮೀಯರು ಪರಂಪರಾಗತ ಕಟ್ಟುಪಾಡುಗಳನ್ನು ಉಳಿಸುವ ಮೂಲಕ ಭಾರತದ ಉತ್ತಮ ಪ್ರಜೆಗಳಾಗಿ ಬಾಳೋಣ. ಗುರುಹಿರಿಯರ ಆಶೀರ್ವಾದ, ಅನುಗ್ರಹವಿದ್ದರೆ ಮಾತ್ರ ನಾವು ಎತ್ತರಕ್ಕೆ ಏರಲು ಸಾಧ್ಯವಿದೆ ಎಂದರು. ತುಳು ಭಾಷೆಯಲ್ಲಿ ಭಾಷಣವನ್ನು ಮಾಡಿದ ಅವರು ತುಳು ಭಾಷೆಯನ್ನು ಉಳಿಸುವುದರೊಂದಿಗೆ ಮಾತೃಭಾಷೆಯನ್ನು ಮರೆಯದಿರೋಣ ಎಂದರು.
        ಶ್ರೀರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಲ ಅಧ್ಯಕ್ಷೆ `ಶ್ರೀಮಾತಾ' ಪ್ರಶಸ್ತಿ ಪುರಸ್ಕೃತರಾದ ಈಶ್ವರಿ ಶ್ಯಾಮ ಭಟ್  ಬೇರ್ಕಡವು ಅವರು ಮಾತೃಸಂಗಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಮಾತೆಯರಿಗೆ ಗೌರವವನ್ನು ನೀಡಬೇಕೆಂಬ ಸಂದೇಶವನ್ನು ಈ ಸರ್ವಧರ್ಮ ಮಾತೃಸಂಗಮದ ಮೂಲಕ ನೀಡುವ ಪ್ರಯತ್ನಕ್ಕೆ ತಲೆಬಾಗಲೇಬೇಕು. ಎಲ್ಲಾ ಧರ್ಮದಲ್ಲಿಯೂ ಅಮ್ಮನಿಗೆ ಶ್ರೇಷ್ಠವಾದ ಸ್ಥಾನವಿದೆ. ಮಾತೆ ಎಂದರೆ ಪ್ರಕೃತಿಯಾಗಿದೆ. ಪ್ರಕೃತಿಯೇ ಎಲ್ಲದಕ್ಕೂ ಮೂಲವಾಗಿದೆ. ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಮಾತೆಯರು ತಮ್ಮ ಮಕ್ಕಳನ್ನು ತಿದ್ದುವ ಸಲುವಾಗಿ ಶಿಕ್ಷೆಯನ್ನು ನೀಡುವುದು ಸಹಜವಾಗಿದೆ. ಪ್ರತಿಯೊಂದು ಹಂತದಲ್ಲಿ ಮಕ್ಕಳಿಗೆ ಕೈತುತ್ತನ್ನು ನೀಡುವ ಮೂಲಕ ಅವರಿಗೆ ಸಂಸ್ಕಾರವನ್ನು ನೀಡಬೇಕು. ಮಾತೆಯೇ ಸರ್ವಸ್ವ ಎಂಬುದನ್ನು ಪುರಾಣದಲ್ಲಿಯೇ ಉಲ್ಲೇಖಿಸಲಾಗಿದೆ. ಇಲ್ಲಿನ ಈ ಸರ್ವಧರ್ಮ ಮಾತೃಸಂಗಮದಿಂದ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಪೂರಕವಾಗಲಿ ಎಂದರು.
     ವಿವಿಧ ಧರ್ಮಗಳ ಮಾತೆಯರಾದ ಪೂಜ್ಯ ಗೌತಮಿ ಮಾತಾಜಿ ಸಾರನಾಥ ಬುದ್ಧವಿಹಾರ ಮೈಸೂರು, ಪ.ಪೂ.ಶ್ರೋ.ಬ್ರ ಮಾತೃಶ್ರೀ ಲಲಿತಮ್ಮ ತಾಯಿ ಆರೂಢ ವಿದ್ಯಾಶ್ರಮ ಕಲ್ಲೂರು ಧಾರವಾಡ, ಜೈನ್ ಮಿಲನ್ ಮೂಡಬಿದ್ರೆಯ ಅಧ್ಯಕ್ಷರು, ನೋಟರಿ ನ್ಯಾಯವಾದಿ ಶ್ವೇತಾ ಜೈನ್, ಶ್ರೀ ಗುರುಸಿಂಗ್ ಸಭಾ ಬೆಂಗಳೂರಿನ ಅಮೃತಾ ಕೌರ್ ಗುರುದ್ವಾರ, ರುಕ್ಸಾನಾ ಬೇಗಂ ಉಳ್ಳಾಲ, ಬಂಗ್ರಮಂಜೇಶ್ವರ ಜಿ.ಎಚ್.ಎಸ್. ಅಧ್ಯಾಪಿಕೆ ಸಿಲ್ವಿಯಾ ಮೊಂತೆರೋ ಪೆರ್ಮುದೆ ಧರ್ಮಸಂದೇಶ ನೀಡಿದರು. ಶಿಕ್ಷಣ ಕ್ಷೇತ್ರದಲ್ಲಿ ಕಡಬ ಎಐಎಂಎಸ್ ಕಾಲೇಜಿನ ಸ್ಥಾಪಕ ಹಾಗೂ ಆಡಳಿತದಾರರಾದ ಮರಿಯಂ ಫೈಸಿಯಾ ಬಿ.ಎಸ್. ಇವರನ್ನು ಸನ್ಮಾನಿಸಲಾಯಿತು. ಸಂಘಟಕ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ ಸನಾತನ ಸಂಸ್ಕೃತಿಯಲ್ಲಿ ಮಾತೆಯರಿಗೆ ನೀಡಿದ ಶ್ರೇಷ್ಠ ಸ್ಥಾನವನ್ನು ಜಗತ್ತಿಗೆ ಪರಿಚಯಿಸುವ ಮೂಲಕ ಉತ್ತಮ ಸಂದೇಶವನ್ನು ನೀಡಬೇಕೆಂಬ ಪ್ರಯತ್ನವನ್ನು ಮಾಡಲಾಗಿದೆ. ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಿದಾಗ ಸಾರ್ಥಕತೆಯನ್ನು ಹೊಂದಲು ಸಾಧ್ಯವಿದೆ ಎಂದರು. ಗೀತಾ ಮನೋಜ್ ಮರೋಳಿ ವಂದಿಸಿದರು. ವರ್ಷಾಲಕ್ಷ್ಮಿ ಕೀರಿಕ್ಕಾಡು ದೇಶಭಕ್ತಿಗೀತೆಯನ್ನು ಹಾಡಿದಳು.
      ಸಭಾಕಾರ್ಯಕ್ರಮದ ಬಳಿಕ ಸ್ಥಳೀಯ ಪ್ರತಿಭೆಗಳಿಂದ ಹಾಗೂ ಜಿ.ಕೆ.ಚಾರಿಟೇಬಲ್ ಟ್ರಸ್ಟ್‍ನ ಬಾಲಪ್ರತಿಭೆಗಳಿಂದ,  ರಿಯಾಲಿಟಿ ಶೋ ಕಲಾವಿದರಿಂದ ನೃತ್ಯ ವೈವಿಧ್ಯ, ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಮಧ್ಯಾಹ್ನ ಶ್ರೀಮಂತ್ರಮೂರ್ತಿ ಗುಳಿಗ ಸನ್ನಿಧಿಯಲ್ಲಿ ಮಹಾಪೂಜೆ, ವಿಶೇಷ ಪ್ರಾರ್ಥನೆ, ಪ್ರಸಾದ ವಿತರಣೆ ನಡೆಯಿತು.
     ಏ.28 ರಂದು ಬೆಳಿಗ್ಗೆ 6.30ಕ್ಕೆ ಸೀಯಾಳಾಭಿಷೇಕ, ಕ್ಷೇರಾಭಿಷೇಕ, 10 ಗಂಟೆಗೆ ಶ್ರೀ ಮಂತ್ರಮೂರ್ತಿ ಗುಳಿಗ ದೈವದ ಕೋಲೋತ್ಸವ ಆರಂಭ, ಮಧ್ಯಾಹ್ನ ತುಲಾಭಾರ ಸೇವೆ, ಶ್ರೀ ದೈವದ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries