ಕೊಚ್ಚಿ: ಕೇರಳ ರಾಜಕೀಯ ಚಾಣಕ್ಯ, ಕೇರಳ ಕಾಂಗ್ರೆಸ್ಸ್ ಎಂ ಬಣದ ಅಧ್ಯಕ್ಷರೂ, ಮಾಜೀ ಸಚಿವ ಪಾಲ ಮಂಡಲ ಶಾಸಕ ಕೆ.ಎಂ.ಮಾಣಿ(86) ಇಂದು ಸಂಜೆ ಎರ್ನಾಕುಲಂ ಖಾಸಗೀ ಆಸ್ಪತ್ರೆಗೆ ಅಸೌಖ್ಯ ಕಾರಣ ದಾಖಲಾಗಿದ್ದವರು ನಿಧನರಾದರು. ಶ್ವಾಸಕೋಶ ಸಂಬಂಧಿ ಅನಾರೋಗ್ಯದ ಕಾರಣ ಅವರನ್ನು ದಾಖಲಿಸಲಾಗಿತ್ತು.
ರಾಜ್ಯದಲ್ಲಿ ಅತೀ ಹೆಚ್ಚುಬ ಬಾರಿ ಹಣಕಾಸು ಸಚಿವರಾಗಿದ್ದ ಕೀರ್ತಿ ಮಾಣಿಯವರದ್ದು. ವಕೀಲರೂ ಆಗಿದ್ದ ಇವರು ಹಲವು ಕೃತಿಗಳನ್ನೂ ರಚಿಸಿ ಜನಪ್ರಿಯರಾಗಿದ್ದರು.
ಅತೀ ಹೆಚ್ಚು ಕಾಲಾವಧಿಯಿಂದ ಸಚಿವ, ಅತೀ ಹೆಚ್ಚು ಕಾಲ ಶಾಸಕ, ಅತೀ ಹೆಚ್ಚು ಸಚಿವ ಸಂಪುಟ ಸದಸ್ಯ, ಅತೀ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಹಣಕಾಸು ಸಚಿವ, ಅತೀ ಹೆಚ್ಚು ಕಾಲಗಳಿಂದ ಹಣಕಾಸು ಮತ್ತು ಯೋಜನಾ ವಿಭಾಗದಲ್ಲಿ ಕಾರ್ಯನಿರ್ವಹಿಸಿರುವ ದಾಖಲೆಗಳು ಕೆ.ಎಂ.ಮಾಣಿಯವರ ವಿಶೇಷತೆಯಾಗಿದೆ. 1964ರಲ್ಲಿ ಪಾಲಂ ವಿಧಾನ ಸಭಾ ಕ್ಷೇತ್ರ ರೂಪೀಕರಣದ ಬಳಿಕ ಈವರೆಗೆ ಅವರೇ ಶಾಸಕರಾಗಿದ್ದುದು ಇನ್ನೊಂದು ದಾಖಲೆಯ ವಿಶೇಷತೆಯಾಗಿದೆ. ಈ ಕಾರಣದಿಂದ ರಾಜ್ಯದ ಒಂದೇ ವಿಧಾನ ಸಭಾ ಕ್ಷೇತ್ರದಲ್ಲಿ ನಿರಂತರವಾಗಿ ಅತಿ ಹೆಚ್ಚು ಬಾರಿ 54 ವರ್ಷಗಳಿಂದ ಶಾಸಕರಾಗಿದ್ದ ಏಕೈಕ ಶಾಸಕ ಮಾಣಿಯವರಾಗಿದ್ದಾರೆ.
ಮಾಣಿ ಅವರು 1960 ರಿಂದ 1964ರ ವರೆಗೆ ಕೋಟ್ಟಯಂ ಡಿಸಿಸಿ ಕಾರ್ಯದರ್ಶಿಯಾಗಿದ್ದರು. ನಾಳೆ ಮೃತದೇಹವನ್ನು ಆಸ್ಪತ್ರೆಯಿಂದ ಕೋಟ್ಟಯಂ ಗೆ ಕರೆತರಲಾಗುವುದು. ವಿವಿಧೆಡೆ ಸಾರ್ವಜನಿಕ ದರ್ಶನಕ್ಕಿರಿಸಿದ ಬಳಿಕ ಸಂಜೆ ವೇಳೆಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎಮದು ತಿಳಿದು ಬಂದಿದೆ.