ಮುಳ್ಳೇರಿಯ: ಹವ್ಯಕ ಮಹಾಮಂಡಲ ಧರ್ಮಕರ್ಮ ವಿಭಾಗದ ನಿರ್ದೇಶನದಲ್ಲಿ ಮುಳ್ಳೇರಿಯಾ ಹವ್ಯಕ ಮಂಡಲ ಗುಂಪೆ ವಲಯ ಮತ್ತು ಸತ್ಯಪ್ರಕಾಶ್ ದಂಪತಿಗಳ ನೇತೃತ್ವದಲ್ಲಿ ವೇದ ಪಾಠ ಶಿಬಿರವು ಜರಗಿತು.
ವಟುಗಳ ರಕ್ಷಕರಾದ ಜಯರಾಮ ಚೆಕ್ಕೆ, ಮಹಾಲಿಂಗ ಭಟ್ ನೇರೋಳು, ಶಂಕರನಾರಾಯಣ ಭಟ್ ನೇರೋಳು, ಕೃಷ್ಣ ಪ್ರಕಾಶ ಗುಂಪೆ, ರಾಮಕೃಷ್ಣ ಪ್ರಸಾದ ಅಮ್ಮಂಕಲ್ಲು, ಕರುವಜೆ ನಡುಮನೆ ಕೃಷ್ಣ ಭಟ್, ತಿರುಮಲೇಶ್ವರ ಭಟ್ ನೆಕ್ಕಿಗುಳಿ ಇವರ ಪೂರ್ಣ ಸಹಕಾರದೊಂದಿಗೆ ನಡೆದ ಶಿಬಿರದಲ್ಲಿ ಮಕ್ಕಳಿಗೆ ವೇದಮೂರ್ತಿ ಮಧುಕರ ಭಟ್ ಅವರು ವೇದಾಧ್ಯಯನ ನಡೆಸಿ ಕೊಟ್ಟರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷ ಅಮ್ಮಂಕಲ್ಲು ರಾಮ ಭಟ್ ವಹಿಸಿದ್ದರು. ವಲಯದಲ್ಲಿ ನಡೆದ ಉತ್ತಮ ಕಾರ್ಯಕ್ರಮ ವಿದ್ಯಾರ್ಥಿಗಳು ಬಹಳ ಆಸಕ್ತಿಯಿಂದ ಪಾಠಕಲಿಸಲಾಗಿದೆ. ಮುಂದಿನ ವರ್ಷವೂ ಇಂತಹ ಶಿಬಿರ ನಡೆಯಲಿ. ವಲಯದ ವತಿಯಿಂದ ಸಂಪೂರ್ಣ ಸಹಾಯ ಸಹಕಾರಗಳನ್ನು ನಾವು ನೀಡಲಿದ್ದೇವೆ ಎಂದರು. ವೇದಮೂರ್ತಿ ಗಣಪತಿ ಭಟ್ ಅವರು ವಿದ್ಯಾರ್ಥಿಗಳಿಗೆ ಆಶೀರ್ವಾದಪೂರ್ವಕ ಹಿತವಚನಗಳನ್ನಿತ್ತರು. ವೇದ ಗುರುಗಳಾದ ಮಧುಕರ ಭಟ್ ಅವರನ್ನು ಶಾಲು ಹೊದಿಸಿ ಸಮ್ಮಾನಿಸಲಾಯಿತು.
ಒಂದು ತಿಂಗಳ ಕಾಲ ಸ್ಥಳಾವಕಾಶ ನೀಡಿದುದಲ್ಲದೆ ಉತ್ತಮ ಆದರಾಥಿತ್ಯ ನೀಡಿದ ಕಾವೇರಿಯಮ್ಮ ಅವರನ್ನು ವಟುಗಳ ಪರವಾಗಿ ಗಾಯತ್ರಿ ಎಡಕ್ಕಾನ ಅವರು ಶಾಲು ಹೊದಿಸಿ ಸಮ್ಮಾನಿಸಿದರು. ಕಾವೇರಿಯಮ್ಮ ಅವರು ಮಕ್ಕಳಿಗೆ ಈ ಸಂದರ್ಭದಲ್ಲಿ ನೆನಪಿನ ಕಾಣಿಕೆ ಇತ್ತರು. ಮಂಡಲ ವಿದ್ಯಾರ್ಥಿವಾಹಿನೀ ಪ್ರಧಾನರಾದ ಕೇಶವ ಪ್ರಸಾದ್ ಎಡಕ್ಕಾನ ಶುಭ ಹಾರೈಸಿದರು ಹಾಗೂ ಮೇ ತಿಂಗಳ 8 ನೇ ತಾರೀಕು ಭಾನ್ಕುಳಿ ಗೋಸ್ವರ್ಗದಲ್ಲಿ ನಡೆಯಲಿರುವ `ಮಕ್ಕಳ ಮಹಾಸಮ್ಮೇಳನ' ಕುರಿತು ತಿಳಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಕುಂಕುಮಾರ್ಚನೆ, ಭಜನಾ ರಾಮಾಯಣ ಪಾರಾಯಣ, ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶಿವಪೂಜೆ ಕಾರ್ಯಕ್ರಮವು ವೇದಮೂರ್ತಿ ಗಣಪತಿ ಭಟ್ ಪಂಜರಿಕೆ ಇವರ ನೇತೃತ್ವದಲ್ಲಿ ನಡೆಯಿತು.
ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಉಪಸ್ಥಿತರಿದ್ದರು. ಸತ್ಯಪ್ರಕಾಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಹಾಲಿಂಗ ಭಟ್ ನೇರೋಳು ವಂದಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.