HEALTH TIPS

ದೇವರ ಸಾನ್ನಿಧ್ಯಕ್ಕೆ ಕ್ಷಯವಿಲ್ಲ:ವಿದ್ವಾನ್. ಹಿರಣ್ಯ ವೆಂಕಟೇಶ್ವರ ಭಟ್

ಕುಂಬಳೆ: ಸ್ಪಷ್ಟ ಹಾದಿಯ ಸಕಾರಾತ್ಮಕ ಯತ್ನಗಳಿದ್ದರೆ ನಿರ್ವಹಿಸುವ ಕರ್ಮ ಶುಭ ಫಲ ನೀಡುತ್ತದೆ. ಭಗವಂತನ ಕುರಿತಾದ ಶ್ರದ್ದೆ ಆವಿರ್ಭವಿಸುವ ಸ್ಥಳ ದೇವಾಲಯಗಳಾಗಿದ್ದು, ದೇಹ,ಜೀವ ಹಾಗೂ ದೇವ ಭಾವಗಳ ಏಕಸೂತ್ರಿತ ವ್ಯವಸ್ಥೆ ಪವಿತ್ರ ಕ್ಷೇತ್ರಗಳಾಗಿವೆ ಎಂದು ಖ್ಯಾತ ಪ್ರವಚನಕಾರ,ವೈದಿಕ ವಿದ್ವಾಂಸ ವಿದ್ವಾನ್. ಹಿರಣ್ಯ ವೆಂಕಟೇಶ್ವರ ಭಟ್ ಅವರು ತಿಳಿಸಿದರು. ಸೂರಂಬೈಲು ಸಮೀಪದ ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮತ್ತು ಉಳ್ಳಾಕ್ಲು, ಧೂಮಾವತಿ, ರಕ್ತೇಶ್ವರಿ ದೈವಸಾನ್ನಿಧ್ಯಗಳ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಥಮ ದಿನವಾದ ಮಂಗಳವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. ಒಂದು ಗ್ರಾಮ, ಊರು, ಮಾಗಣೆಯಲ್ಲಿ ಪ್ರಧಾನವಾದ ಮೂರು ಆಲಯಗಳಿರಬೇಕು. ದೇವಾಲಯ, ವಿದ್ಯಾಲಯ ಮತ್ತು ಔಷಧಾಲಯಗಳು ಉತ್ತಮ ಸಮಾಜಕ್ಕೆ ಅಗತ್ಯ. ಈ ಮೂರೂ ಆಲಯಗಳಿಲ್ಲದಲ್ಲಿ ಬದುಕಲೇ ಬಾರದು ಎಂದು ಶಾಸ್ತ್ರ ಹೇಳುತ್ತದೆ. ದೇವಾಲಯದಲ್ಲಿ ಆರಾಧನೆ ನಿಲ್ಲುವುದು ದೊಡ್ಡ ದೋಷ. ಆದರೆ ಭಗವಂತನ ಸಾನ್ನಿಧ್ಯವು ಎಂದಿಗೂ ಕ್ಷಯವಾಗುವುದಿಲ್ಲ, ಭಜಕರಿಗೆ ದೊರಕುವ ಅನುಗ್ರಹ ಮಾತ್ರ ಕಡಿಮೆಯಾಗುತ್ತದೆ ಎಂದು ಅವರು ತಿಳಿಸಿದರು. ದೇಹದ ಚಟುವಟಿಕೆಗೆ ಜೀರ್ಣವಾಗುವುದು ಅಗತ್ಯ. ಆದರೆ ದೇವಾಲಯಗಳು ಜೀರ್ಣವಾಗಬಾರದು. ಆಚಾರ್ಯರ ತಪಸ್ಸು, ಆಮ್ನಾಯ ಜಪ, ಉತ್ಸವ, ಅನ್ನದಾನ ಮತ್ತು ನಿಯಮಗಳ ಅನುಸರಣೆ ಇವುಗಳು ಕ್ಷೇತ್ರದ ಅಭಿವೃದ್ಧಿಗೆ ಕಾರಣಗಳು. ಇವುಗಳನ್ನು ಅನುಸರಿಸುವುದು ನಾವು ದೇವರ ಅನುಗ್ರಹಕ್ಕೆ ಪಾತ್ರರಾಗಲು ನಾವು ಅರ್ಹರು ಎಂಬುದನ್ನು ತೋರಿಸಿಕೊಡುತ್ತದೆ ಎಂದು ವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್ ಅಭಿಪ್ರಾಯಪಟ್ಟರು. ಶ್ರೀ ಕ್ಷೇತ್ರ ಮಲ್ಲದ ಧರ್ಮದರ್ಶಿ ಆನೆಮಜಲು ವಿಷ್ಣು ಭಟ್ ಅಧ್ಯಕ್ಷತೆ ವಹಿಸಿದರು. ಭಗವದ್ಗೀತೆಯಲ್ಲಿ ವಿಶ್ವಮಾನವತಾ ವಾದದ ಕುರಿತಾಗಿ ಸುಗುಣಾ ಬಾಲಕೃಷ್ಣ ತಂತ್ರಿಯವರು ಬರೆದ ಅಶೋಚ್ಯಾನ್ ಅನ್ವಶೋಚಸ್ತ್ವಮ್ ವಿಶೇಷ ಬರಹಗಳ ಪುಸ್ತಕವನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಪುತ್ತಿಗೆ ಗ್ರಾಮ ಪಂಚಾಯತು ಸದಸ್ಯ ವರಪ್ರಸಾದ್ ಪೆರ್ಣೆ, ಚಂದ್ರ.ಯಂ, ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಯಚ್. ಶಿವರಾಮ ಭಟ್ ಶುಭಾಶಂಸನೆಗೈದರು. ಬ್ರಹ್ಮಕಲಶೋತ್ಸವ ಸಮಿತಿಯ ಬಿ.ವಸಂತ ಪೈ ಬದಿಯಡ್ಕ, ಡಿ.ಕೃಷ್ಣ ಭಟ್ ದೊಡ್ಡಮಾಣಿ ಮತ್ತು ಪ್ರವೀಣ ದೊಡ್ಡಮಾಣಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀಕೃಷ್ಣಪ್ರಸಾದ್.ಕೆ.ಎಚ್ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿಯ ಜೊತೆಕಾರ್ಯದರ್ಶಿ ಸೂರ್ಯನಾರಾಯಣ ಹೊಸಮನೆ ವಂದಿಸಿದರು. ನೀನಾಸಂ ಕಲಾವಿದ ಮಂಜುನಾಥ ಹೊಸಮನೆ ಕಾರ್ಯಕ್ರಮ ನಿರೂಪಿಸಿದರು. ಸಂಜೆ ಶ್ರೀಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳನ್ನು ಪೂರ್ಣಕುಂಭಗಳೊಂದಿಗೆ ಸ್ವಾಗತಿಸಲಾಯಿತು. ವೈದಿಕ ಕಾರ್ಯಕ್ರಮಗಳ ಅಂಗವಾಗಿ ರಾತ್ರಿ ಆಚಾರ್ಯವರಣ, ಋತ್ವಿಕವರಣ, ಪುಣ್ಯಾಹ, ಅಂಕುರಾರೋಪಣ, ಸ್ಥಳಶುದ್ಧಿ, ಪ್ರಾಸಾದಶುದ್ಧಿ, ವಾಸ್ತುಹೋಮ, ರಕ್ಷೋಘ್ನ ಹೋಮಗಳು ಜರಗಿದವು. ಬುಧವಾರದಂದು ಬೆಳಿಗ್ಗೆ ಗಣಪತಿ ಹೋಮ, ಉಷಃಪೂಜೆ, ಅಂಕುರಪೂಜೆ, ಚತುಃಶುದ್ಧಿ, ಧಾರಾಪಂಚಕಂ, ಪಂಚಗವ್ಯಂ ಮತ್ತು ಸಾಯಂಕಾಲ ಕುಂಡ ಶುದ್ಧಿ, ಅಂಕುರಪೂಜೆ, ರಾತ್ರಿಪೂಜೆಗಳ ವಿಧಿವಿಧಾನಗಳು ನೆರವೇರಿದವು. ಅನಂತಪದ್ಮನಾಭ ಮಹಿಳಾ ಭಜನಾ ಸಂಘ ಅನಂತಪುರ, ಸಾರಥಿ ಮಹಿಳಾ ಭಜನಾ ಸಂಘ ಮುಜುಂಗಾವು, ಮಹಾದೇವ ಶಾಸ್ತಾರ ಭಜನಾ ಸಂಘ ಕಿದೂರು ಇವರಿಂದ ಬೆಳಿಗ್ಗೆ ಮತ್ತು ಶಾಸ್ತಾ ಭಜನಾ ಸಂಘ ನಾಯ್ಕಾಪು ಇವರಿಂದ ಅಪರಾಹ್ನ ಭಜನಾ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ 10.30 ರಿಂದ ಯಸ್.ಯಸ್.ಯಸ್.ಗ್ರೂಪ್, ಐ.ಸಿ.ರೋಡ್ ಮುಜುಂಗಾವು ಇವರಿಂದ ಭಕ್ತಿಗಾನಸುಧಾ, ಅಪರಾಹ್ನ ಯಕ್ಷಭಾರತೀ ನೀರ್ಚಾಲು ಇವರಿಂದ `ಸುಧನ್ವ ಮೋಕ್ಷ" ಯಕ್ಷಗಾನ ತಾಳಮದ್ದಳೆ, ಸಾಯಂಕಾಲ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಇವರಿಂದ ಹರಿಕಥಾ ಸಂಕೀರ್ತನೆ ಮತ್ತು ಸ್ಥಳೀಯ ಕಲಾವಿದರಿಂದ ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯಗಳು ಜರಗಿದವು. ಇಂದಿನ ಕಾರ್ಯಕ್ರಮ: ಗುರುವಾರದಂದು ಬೆಳಿಗ್ಗೆ ಗಣಪತಿ ಹೋಮ, ಉಷಃಪೂಜೆ, ಅಂಕುರಪೂಜೆ, ತತ್ತ್ವಕಲಶ ಪೂಜೆ, ತತ್ತ್ವಹೋಮ, ಅನುಜ್ಞಾಕಲಶ ಪೂಜೆ, ತತ್ತ್ವಕಲಶಾಭಿಷೇಕ ಜರಗಲಿದೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಪ್ರಸಾದ ಭೋಜನದ ನಂತರ ಸಾಯಂಕಾಲ ಅಧಿವಾಸ ಹೋಮ, ಕಲಶಾಧಿವಾಸ ಕ್ರಿಯೆಗಳು ಮತ್ತು ಪ್ರಾರ್ಥನೆಗಳು ನಡೆಯಲಿವೆ. ಶ್ರೀರಾಮ ಭಜನಾ ಸಂಘ ನಾಯ್ಕಾಪು, ಮಹಾದೇವಿ ಮಹಿಳಾ ಭಜನಾ ಸಂಘ ಕಳತ್ತೂರು, ವಿವೇಕಾನಂದ ಸ್ವಸಹಾಯ ಸಂಘ ಬೆರಿಪದವು ಇವರಿಂದ ಬೆಳಿಗ್ಗೆ ಮತ್ತು ಶ್ರೀಕೃಷ್ಣ ಭಜನಾ ಮಂಡಳಿ ಮಂಗಲ್ಪಾಡಿ ಇವರಿಂದ ಅಪರಾಹ್ನ ಭಜನಾ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ 10.30 ರಿಂದ ವಾಣಿಪ್ರಸಾದ್ ಕಬೆಕ್ಕೋಡು ಇವರ ಶಿಷ್ಯೆ ಕುಮಾರಿ ರೂಪಾ ಕನಕಪ್ಪಾಡಿ ಇವರಿಂದ ಸಂಗೀತ ಕಛೇರಿ, ಸಂಜೆ ಡಾ.ಕಿರಣ್ ಕುಮಾರ್, 'ಗಾನಸಿರಿ' ಪುತ್ತೂರು ಇವರ ಶಿಷ್ಯೆ ಕುಮಾರಿ ವಿಭಾಶ್ರೀ ಬೆಳ್ಳಾರೆ ಇವರಿಂದ ಭಕ್ತಿ-ಭಾವ-ಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾಟ್ಯ ವಿದ್ಯಾನಿಲಯ ಕುಂಬಳೆಯ ವಿದ್ಯಾಲಕ್ಷ್ಮಿ ಇವರ ಶಿಷ್ಯವೃಂದದವರಿಂದ ರಾತ್ರಿ 8 ಗಂಟೆಗೆ 'ನೃತ್ಯ ಸಂಭ್ರಮ - 2019' ಕಾರ್ಯಕ್ರಮ ಪ್ರಸ್ತುತಿ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries