ಅನಧಿಕೃತ ಕಬ್ಬಿಣ ಸಲಕರಣೆ ತಯಾರಿ, ವೆಲ್ಡಿಂಗ್ ಘಟಕಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹ
0
ಏಪ್ರಿಲ್ 01, 2019
ಪೆರ್ಲ:ಎಣ್ಮಕಜೆ, ಬದಿಯಡ್ಕ, ಚೆಂಗಳ, ಕುಂಬ್ಡಾಜೆ, ಪುತ್ತಿಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಯಂ ಕಟ್ಟಡ ಹೊಂದಿರದ ಅನಧಿಕೃತ ಕಬ್ಬಿಣ ಸಲಕರಣೆ ತಯಾರಿ ಘಟಕಗಳ ಕಾರ್ಯಾಚರಣೆಯಿಂದ ಸರಕಾರಿ ಅಂಗೀಕೃತ ಹಾಗೂ ಪಂಚಾಯಿತಿ ಪರವಾನಿಗೆ ಹೊಂದಿರುವ ಕಬ್ಬಿಣ ಸಲಕರಣೆ, ಇಂಜಿನಿಯರಿಂಗ್ ವಕ್ರ್ಸ್ ಉದ್ದಿಮೆದಾರರಿಗೆ ಹೊಡೆತ ಬಿದ್ದಿರುವ ಆರೋಪ ಕೇಳಿ ಬಂದಿದೆ.
ಈ ಐದು ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸರಕಾರದಿಂದ ಯಾವುದೇ ಅಂಗೀಕಾರ ಪಡೆಯದೆ, ಮಾನದಂಡಗಳನ್ನು ಪಾಲಿಸದೆ, ಸ್ವಂತ ಕಟ್ಟಡ, ಪಂಚಾಯಿತಿ ಪರವಾನಿಗೆ ಇತರ ದಾಖಲೆ ಹೊಂದಿರದ ಅನೇಕ ಅನಧಿಕೃತ ವೆಲ್ಡಿಂಗ್ ಘಟಕಗಳು ತಲೆಯೆತ್ತಿದ್ದು ಅಧಿಕೃತ ಉದ್ದಿಮೆದಾರರಿಗೆ ಕೆಲಸವಿಲ್ಲದ ಸ್ಥಿತಿ ಉಂಟಾಗಿದೆ.ಕಾರ್ಮಿಕರಿಗೆ ವೇತನ ಪಾವತಿ, ಕಟ್ಟಡ ಬಾಡಿಗೆ, ವಿದ್ಯುತ್ ಬಿಲ್, ಪರವಾನಗಿ ನವೀಕರಣ ಸಾಧ್ಯವಾಗುತ್ತಿಲ್ಲ ಎಂದು ಉದ್ದಿಮೆದಾರರು ತಿಳಿಸಿದ್ದಾರೆ.
ಅನಧಿಕೃತ ಘಟಕಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕಾಸರಗೋಡು ಜಿಲ್ಲಾ ಕೆ.ಐ.ಎಫ್.ಇ.ಯು.ಎ.(ಕೇರಳ ಐರನ್ ಫೇಬ್ರಿಕೇಶನ್ ಆಂಡ್ ಇಂಜಿನಿರಿಂಗ್ ಯುನಿಟ್ ಅಸೋಸಿಯೇಷನ್) ಪದಾಧಿಕಾರಿಗಳು ಈ ಹಿಂದೆ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದು, ಅನಧಿಕೃತ ವೆಲ್ಡಿಂಗ್ ಘಟಕಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪಂಚಾಯಿತಿ ಉಪ ನಿರ್ದೇಶಕರಿಗೆ ನಿರ್ದೇಶಿಸಿದ್ದರು.
ಪಂಚಾಯಿತಿ ಉಪ ನಿರ್ದೇಶಕರು ಜಿಲ್ಲೆಯ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ಅನಧಿಕೃತ ಉದ್ದಿಮೆ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ನಿರ್ದೇಶನ ಹೊರಡಿಸಿದ್ದರು.
ಅನಧಿಕೃತ ಸಂಚಾರಿ ವೆಲ್ಡಿಂಗ್ ಉದ್ಯಮಿಗಳು ಪರವಾನಗಿ ಇಲ್ಲದೆ ಹಾಗೂ ಸರಕಾರಿ ಮಾನದಂಡಗಳನ್ನು ಪಾಲಿಸದೆ ಬದಿಯಡ್ಕ ವಲಯದ ನಾನಾ ಭಾಗಗಳಲ್ಲಿ ಯಾವುದೇ ಅಡೆತಡೆಗಳಿಲ್ಲದೆ ನಿಯಮ ಉಲ್ಲಂಘಿಸಿ ಕೆಲಸ ನಡೆಸುತ್ತಿದ್ದು ಇಂತವರ ಮಾಹಿತಿಯನ್ನು ಅಸೋಸಿಯೇಷನ್ ಪದಾಧಿಕಾರಿಗಳು ಆಯಾ ಪಂಚಾಯಿತಿ ಅಧಿಕೃತರಿಗೆ ತಿಳಿಸಲಿದ್ದು ಅನಧಿಕೃತ ವೆಲ್ಡಿಂಗ್ ಘಟಕಗಳು ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಮರು ಮನವಿ ಸಲ್ಲಿಸುವುದಾಗಿ ಬದಿಯಡ್ಕ ವಲಯ ಫೇಬ್ರಿಕೇಶನ್ ಮತ್ತು ಇಂಜಿನಿಯರಿಂಗ್ ಯುನಿಟ್ ಅಸೋಸಿಯೇಷನ್ ಪದಾಧಿಕಾರಿಗಳು ತಿಳಿಸಿದ್ದಾರೆ.
ಎಣ್ಮಕಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಅನಧಿಕೃತ ಸಂಚಾರಿ ವೆಲ್ಡಿಂಗ್ ಉದ್ಯಮ ಕಾರ್ಯಾಚರಣೆ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬದಿಯಡ್ಕ ವಲಯ ಫೇಬ್ರಿಕೇಶನ್ ಮತ್ತು ಇಂಜಿನಿಯರಿಂಗ್ ಯುನಿಟ್ ಅಸೋಸಿಯೇಷನ್ ವಲಯಾಧ್ಯಕ್ಷ ರಾಮಕೃಷ್ಣ ರೈ, ಖಜಾಂಚಿ ವಿಲ್ಫ್ರಡ್ ಡಿಸೋಜಾ, ಜೊತೆ ಕಾರ್ಯದರ್ಶಿ ನವೀನ್ ಕುಮಾರ್, ಸದಸ್ಯರುಗಳಾದ ವಸಂತ ಕುಮಾರ್, ವಿಜಯ ಕುಮಾರ್, ಗಿರೀಶ್ ರೈ, ಅಶೋಕ್ ಕುಮಾರ್ ನೇತೃತ್ವದಲ್ಲಿ ಎಣ್ಮಕಜೆ ಗ್ರಾ.ಪಂ.ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ.ಮನವಿ ಸ್ವೀಕರಿಸಿದ ಅವರು ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿರುವುದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ.