ಕಾಸರಗೋಡು: ಕಾಸರಗೋಡು ಸಿವಿಲ್ ಸ್ಟೇಷನ್ ನ ಕಂದಾಯ ವಿಭಗ ಇರುಳನ್ನು ಹಗಲು ಮಾಡಿ ದುಡಿಯುತ್ತಿದೆ. ಏ.23ರಂದು ನಡೆಯುವ ಲೋಕಸಭೆ ಚುನಾವಣೆ ಸುಗಮವಾಗಿ ನಡೆಯುವ ನಿಟ್ಟಿನಲ್ಲಿ ನಡೆಸಲಾಗುತ್ತಿರುವ ಒಗ್ಗಟ್ಟಿನ ಯತ್ನದ ಫಲವಾಗಿ ಕಳೆದ 3 ತಿಂಗಳಿಂದ ಈ ವಿಭಾಗದ ಸಿಬ್ಬಂದಿ ಅಹೋರಾತ್ರಿ ಸತತ ದುಡಿಮೆ ನಡೆಸುತ್ತಿದ್ದಾರೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ದಕ್ಷತೆಯೊಂದಿಗೆ ಚುನಾವಣೆಯ ಸಿದ್ಧತೆ ಪೂರ್ಣಗೊಂಡಿದೆ. ಸಿಬ್ಬಂದಿಯ ಔದ್ಯೋಗಿಕ ನಿರ್ವಹಣೆಯಲ್ಲಿ ಹಗಲು, ರಾತ್ರಿಯ, ಕರ್ತವ್ಯದ ದಿನ, ರಜಾದಿನಗಳ ವಿವೇಚನೆಯಿಲ್ಲ. ಅದರಲ್ಲೂ ಚುನಾವಣೆ ವಿಭಾಗದ ಸಿಬ್ಬಂದಿಯ ಹೊಣೆಗಾರಿಕೆ ಹೆಚ್ಚುವರಿಯಾಗಿದೆ. ಬೆಳಗ್ಗೆ ಬಹಳ ಬೇಗನೇ ಕಚೇರಿಗೆ ತಲಪುವ ಸಿಬ್ಬಂದಿ ರಾತ್ರಿ ಬಹಳ ಹೊತ್ತಿನ ವರೆಗೂ ದುಡಿಯುತ್ತಿದ್ದಾರೆ. ಕೆಲವರು ಮರುದಿನ ನಸುಕಿನ ವರೆಗೂ ಕಾಯಕ ನಿರತರಾಗುತ್ತಿದ್ದಾರೆ.
ಚುನಾವಣೆ ನಿರೀಕ್ಷರು ಬಯಸುವ ತುರ್ತು ವರದಿ ಸಲ್ಲಿಸುವ, ಕಾಸರಗೋಡು ಲೋಕಸಭೆ ಕ್ಷೇತ್ರದ 5 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಅಧಿಕಾರಿಗಳ ಕಾಯಕಗಳಿಗೆ ಸಹಕಾರ ನೀಡುವ, ಮತದಾನ ಸಂಬಮಧ ಸಾಮಾಗ್ರಿಗಳನ್ನು ಯಥಾಸಮಯದಲ್ಲಿ ಆಯಾ ಕೇಂದ್ರಗಳಿಗೆ ತಲಪಿಸುವ, ಮತಗಟ್ಟೆ ಕರ್ತವ್ಯ ಸಿಬ್ಬಂದಿಗೆ ತರಬೇತಿ ಈಡುವ, ಚುನಾವಣೆ ಜಾಗೃತಿ ಚಟುವಟಿಕೆಗಳನ್ನು ನಡೆಸುವ, ಸಾರ್ವಜನಿಕರಿಂದ, ರಾಜಕೀಯ ಪಕ್ಷಗಳಿಂದ ದೂರುಗಳನ್ನು ಸ್ವೀಕರಿಸಿ, ಸೂಕ್ತ ಅವಧಿಯಲ್ಲೇ ಪರಿಹಾರ ಒದಗಿಸುವ, ವಿವಿಧ ವಿಭಾಗಗಳ ನೋಡೆಲ್ ಅಧಿಕಾರಿಗಳ ಕರ್ತವ್ಯಗಳನ್ನು ಏಕೀಕರಿಸುವ ಇತ್ಯಾದಿ ಹೊಣೆಗಾರಿಕೆಯನ್ನು ಇವರು ನಿರ್ವಹಿಸುತ್ತಾರೆ.
ಚುನಾವಣೆಯ ಅಧಿಸೂಚನೆ ಪ್ರಕಟಗೊಳ್ಳುವ ಮುನ್ನವೇ ಆಂಟಿ ಡೀಫೇಸ್ ಮೆಂಟ್ ಸ್ಕ್ವಾಡ್, ಸ್ಟಾಟಿಕ್ ಸರ್ವೆಲೆನ್ಸ್ ಟೀಂ, ವೀಡಿಯೋ ಸರ್ವೆಲೆನ್ಸ್ ಟೀಂ, ಎಕ್ಸ್ ಪೆಂಡೀಚರ್ ಮೋನಿಟರಿಂಗ್ ಟೀಂ ಇತ್ಯಾದಿಗಳನ್ನು ರಚಿಸಲಾಗಿದ್ದು, ಇವುಗಳ ಚಟುವಟಿಕೆಗಳಲ್ಲಿ ಈ ಸಿಬ್ಬಂದಿ ಬಿರುಸಿನ ಕರ್ತವ್ಯ ನಡೆಸಿದ್ದರು.
ಇವುಗಳಲ್ಲದೆ ಮತದಾತರ ಪಟ್ಟಿ ಪ್ರಕಟಿಸುವ, ಚುನಾವಣೆ ವೆಚ್ಚ ಗಣನೆ ಮಾಡುವ, ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ನಿಗಾ ಇರಿಸುವ ಇತ್ಯಾದಿ ಕಾಯಕಗಳನ್ನು ಸೂಕ್ತ ಅವಧಿಯ್ಲಿ ಸಿಬ್ಬಂದಿ ತ್ವರಿತಗತಿಯಲ್ಲಿ ನಡೆಸಿಕೊಂಡು ಬಂದಿದ್ದಾರೆ.
ಹೆಚ್ಚುವರಿ ಸಿ.ಬಿಜು, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ವಿ.ಪಿ.ಅಬ್ದು ರಹಮಾನ್, ಕಿರಿಯ ವರಿಷ್ಠಾಧಿಕಾರಿಗೋವಿಂದನ್ ರಾವಣೀಶ್ವರಂ, ಕೆಲ್ಟ್ರಾನ್ ಪ್ರೋಗ್ರಾಮರ್ ಎ.ವಿ.ಷೀಬಾ, ಹಿರಿಯ ಗುಮಾಸ್ತರಾದ ಕೆ.ಟಿ.ವಿನೋದ್, ಸುರೇಶ್, ಸುಜಿತ್ ಕುಮಾರ್, ಸತೀಶ್ ಚೊಯ್ಯಕ್ಕೋಡ್ ಮೊದಲಾದವರು ಚುನಾವಣೆ ವಿಭಾಗದಲ್ಲಿ ಕರ್ತವ್ಯದಲ್ಲಿದ್ದಾರೆ.