ತಿರುವನಂತಪುರ: ತಿರುವನಂತಪುರದ ಗಾಂಧಾರಿ ಅಮ್ಮೋಳ್ ದೇವೀ ದೇವಾಲಯದಲ್ಲಿ ತುಲಾಭಾರ ನಡೆಸುವ ವೇಳೆ ತಕ್ಕಡಿ ಮುರಿದು ಬಿದ್ದ ಕಾರಣ ಗಾಯಗೊಂಡ ತಿರುವನಂತಪುರದ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್ ಅವರನ್ನು ಭೇಟಿಯಾದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಯೋಗ ಕ್ಷೇಮ ವಿಚಾರಿಸಿದರು.
ತಿರುವನಂತಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಶಿ ತರೂರು ಅವರನ್ನು ಮಂಗಳವಾರ ಬೆಳಗ್ಗೆ ಭೇಟಿಯಾಗಿ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು.
ವಿಶು ಹಬ್ಬದ ದಿನವಾದ ಸೋಮವಾರ ತರೂರ್ ಅವರು ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ದೇಗುಲಲ್ಲಿ ತುಲಾಭಾರ ಕೈಗೊಂಡರು. ತಮ್ಮಷ್ಟೇ ತೂಕದ ಸಕ್ಕರೆಯನ್ನು ದೇವಸ್ಥಾನಕ್ಕೆ ಅರ್ಪಿಸಲು ತಕ್ಕಡಿಯಲ್ಲಿ ಕುಳಿತುಕೊಂಡಾಗ ತಕ್ಕಡಿ ಏಕಾಏಕಿ ಮುರಿದು ಬಿತ್ತು. ಹೀಗಾಗಿ ತರೂರ್ ಕೆಳಕ್ಕೆ ಬಿದ್ದಿದ್ದರು. ಅವರ ತಲೆಗೆ ಗಾಯವಾಯಿತು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ ತಲೆಗೆ ಆರು ಹೊಲಿಗೆಗಳನ್ನು ಹಾಕಲಾಗಿದೆ.
ವಿಷಯ ತಿಳಿದು ಎನ್‍ಡಿಎ ಪರ ಪ್ರಚಾರದಲ್ಲಿರುವ ನಿರ್ಮಲಾ ಸೀತಾರಾಮ್ ಅವರು ಮಂಗಳವಾರ ಆಸ್ಪತ್ರೆಗೆ ತೆರಳಿ ತರೂರು ಅವರನ್ನು ಭೇಟಿಯಾದರು.