ನವದೆಹಲಿ: ರಾಫೆಲ್ ವಿವಾದದ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ತಪ್ಪಾಗಿ ಉಚ್ಚರಿಸಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿಷಾದ ವ್ಯಕ್ತಪಡಿಸಿದ್ದಾರೆ. ರಾಹುಲ್ ಸೋಮವಾರ ಈ ಸಂಬಂಧ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ತಪ್ಪಾಗಿ ವಿವರಿಸಿದ್ದ ರಾಹುಲ್ ಅವರಿಗೆ ಕೋರ್ಟ್ ಏಪ್ರಿಲ್ 22 ರೊಳಗೆ ತಮ್ಮ ಮಾತಿಗೆ ತಕ್ಕ ವಿವರಣೆಯನ್ನು ನೀಡಬೇಕೆಂದು ನಿರ್ದೇಶನ ನೀಡಿತ್ತು. ಇದರಂತೆ ಅವರು ಸೋಮವಾರ ನ್ಯಾಯಾಲಯಕ್ಕೆ ವಿವರಣೆ ಸಲ್ಲಿಸಿ ತಮ್ಮ ತಪ್ಪಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಪಕ್ಷದ ಪರ ಪ್ರಚಾರ ಮಾಡುವ ಸಂದರ್ಭ ಪ್ರಚಾರದ ಕಾವಿನಲ್ಲಿ ಇಂತಹಾ ತಪ್ಪಾದ ಹೇಳಿಕೆ ನೀಡಿದ್ದಾಗಿ ರಾಹುಲ್ ಅಫಿಡವಿಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠವು ರಾಫೆಲ್ ತೀರ್ಪಿನ ಕುರಿತು ರಾಹುಲ್ ಗಾಂಧಿ ಮಾದ್ಯಮಗಳೆದುರು ನೀಡಿದ್ದ ಹೇಳಿಕೆ ತೀರ್ಪನ್ನು ತಪ್ಪಾಗಿ ಬಿಂಬಿಸಿದೆ ಎಂದು ಹೇಳೀದೆ.
ಬಿಜೆಪಿ ಸಂಸದ ಮೀನಾಕ್ಷಿ ಲೇಖಿ ಸಲ್ಲಿಸಿದ ಅರ್ಜಿಯ ಕುರಿತು ಗಾಂಧಿಯವರ ವಿವರಣೆಯನ್ನು ಉನ್ನತ ನ್ಯಾಯಾಲಯವು ಕೋರಿತ್ತು. ಲೇಖಿ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಅಪರಾಧ ಪ್ರಕರಣ ದಾಖಲಿಸಲು ಕೋರಿದ್ದರು. ನ್ಯಾಯಾಲಯವು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ.