ಕುಂಬಳೆ: ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜರಗುತ್ತಿರುವ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಕೊನೆಯ ದಿನವಾದ ಇಂದು ಬುಧವಾರ ಪ್ರಾತಃಕಾಲ 5 ಕ್ಕೆ ಕವಾಟ ಉದ್ಘಾಟನೆ, ಕಣಿದರ್ಶನ, ತೈಲಾಭಿಷೇಕ, ಪ್ರಾಯಶ್ಚಿತ್ತ ಕಲಶಾಭಿಷೇಕ, ಚತುರ್ಥ ಕಲಶಗಳ ಪರಿಕಲಶಾಭಿಷೇಕ, ಸಪರಿವಾರ ಪೂಜೆ, ಅವಸೃತ ಪ್ರೋಕ್ಷಣೆ, ಬ್ರಹ್ಮಕಲಶಪೂಜೆ, ತತ್ತ್ವ ಹೋಮಗಳ ನಂತರ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳು ಬ್ರಹ್ಮಕಲಶಾಭಿಷೇಕವನ್ನು ನೆರವೇರಿಸುವರು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಪ್ರಸಾದ ಭೋಜನದ ಬಳಿಕ ರಾತ್ರಿ ಮಹಾಪೂಜೆ, ಶ್ರೀ ಭೂತಬಲಿ ಉತ್ಸವ, ಮಂತ್ರಾಕ್ಷತೆ ಕಾರ್ಯಕ್ರಮಗಳು ನಡೆಯಲಿವೆ.
ಮಹಾದೇವ ಭಜನಾ ಸಂಘ ಕಳತ್ತೂರು, ವೈಕುಂಠ ಕಾಮತ್ ಮಹಿಳಾ ಬಳಗ ಕುಂಬಳೆ ಇವರಿಂದ ಬೆಳಿಗ್ಗೆ ಮತ್ತು ವಿಶ್ವಕರ್ಮ ಭಜನಾ ಸಂಘ ಸೂರಂಬೈಲು ಹಾಗೂ ಕುಂಬಳೆ ಕೃಷ್ಣನಗರದ ಸಪ್ತಗಿರಿ ಭಜನಾ ಸಂಘ ಇವರಿಂದ ಅಪರಾಹ್ನ ಭಜನಾ ಕಾರ್ಯಕ್ರಮ ನಡೆಯಲಿದೆ.
ಹೊಸನಗರ ಶ್ರೀರಾಮಚಂದ್ರಾಪುರಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಅಪರಾಹ್ನ 3.30ಕ್ಕೆ ಶ್ರೀ ಕ್ಷೇತ್ರಕ್ಕೆ ಆಗಮಿಸಲಿದ್ದು ಪೂರ್ಣಕುಂಭ ಸ್ವಾಗತದ ನಂತರ, ಪಾದುಕಾಪೂಜೆ ನೆರವೇರಿಸಲಾಗುವುದು.
ಸಂಜೆ 4 ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡುವರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಟೀಲು ಶ್ರೀದುರ್ಗಾ ಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ ವಹಿಸರುವರು. ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ್ಯ ಅಧ್ಯಕ್ಷ ಯಂ.ಬಿ.ಪುರಾಣಿಕ್ ಧಾರ್ಮಿಕ ಉಪನ್ಯಾಸ ನೀಡುವರು. ಕಾರ್ಯಕ್ರಮದಲ್ಲಿ ಕೇರಳ ಸರಕಾರದ ಸ್ಥಳೀಯಾಡಳಿತ ವಿಭಾಗದ ವಿಶೇಷ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್, ಕ್ಯಾಂಪ್ಕೊ ಸಂಸ್ಥೆಯ ಕೋಳಾರು ಸತೀಶ್ಚಂದ್ರ ಭಂಡಾರಿ, ಉದ್ಯಮಿ ಇ.ಎಸ್.ಮಹಾಬಲೇಶ್ವರ ಭಟ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಚೇತನಾ.ಯಂ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶ್ರೀಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಬಿ.ವಸಂತ ಪೈ ಬದಿಯಡ್ಕ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಮಂಗಳವಾರ ಪ್ರಾತಃಕಾಲ 6.30 ರಿಂದ ಗಣಪತಿ ಹೋಮ, ಸೋಪಾನದಲ್ಲಿ ಪೂಜೆ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ, ತತ್ತ್ವ ಹೋಮ, ತತ್ತ್ವಕಲಶ ಪೂಜೆಗಳು ನೆರವೇರಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಪ್ರಸಾದ ಭೋಜನದ ಬಳಿಕ ಸಂಜೆ ಸೋಪಾನದಲ್ಲಿ ಪೂಜೆ, ಅಧಿವಾಸ ಹೋಮ, ಕಲಶಾಧಿವಾಸ, ಪ್ರಾರ್ಥನೆಯ ನಂತರ ರಾತ್ರಿ ಮಹಾಪೂಜೆ ನಡೆಯಿತು.
ಶ್ರೀ ಅನಂತಪದ್ಮನಾಭ ಭಜನಾ ಸಂಘ ಅನಂತಪುರ, ಶ್ರೀ ಸತ್ಯನಾರಾಯಣ ಭಜನಾ ಸಂಘ ಮುಖಾರಿಗದ್ದೆ ಇವರಿಂದ ಬೆಳಿಗ್ಗೆ ಮತ್ತು ಕುತ್ಯಾಳ ರಕ್ತೇಶ್ವರಿ ಭಜನಾ ಸಂಘ ಕೋಟೆಕ್ಕಾರು ಇವರಿಂದ ಅಪರಾಹ್ನ ಭಜನಾ ಕಾರ್ಯಕ್ರಮ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ 10.30 ರಿಂದ ಬಂಟ್ವಾಳದ ಕುಮಾರಿ ಗಹನಶ್ರೀ ಕಡೇಶಿವಾಲಯ ಮತ್ತು ಬಳಗದವರಿಂದ ಸಂಗೀತ ಕಛೇರಿ ಜರಗಲಿದೆ. ಅಪರಾಹ್ನ 2 ರಿಂದ ಶ್ರೀಕೃಷ್ಣ ಲೀಲಾಮೃತಂ ಯಕ್ಷಗಾನ ತಾಳಮದ್ದಳೆ ಜರಗಲಿದೆ. ಹಿಮ್ಮೇಳ ಕಲಾವಿದರಾಗಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ತಲ್ಪಣಾಜೆ ಶಿವಶಂಕರ ಭಟ್, ಗೋಪಾಲಕೃಷ್ಣ ನಾವಡ ಮಧೂರು, ಮುರಳೀಮಾಧವ ಮಧೂರು ಇವರು ಸಹಕರಿಸಿದರು. ಅರ್ಥಧಾರಿಗಳಾಗಿ ಯಚ್.ಶಂಭು ಶರ್ಮ, ರಾಧಾಕೃಷ್ಣ ಕಲ್ಚಾರ್, ಸಪರ್ಂಗಳ ಈಶ್ವರ ಭಟ್, ಹರೀಶ ಬಳಂತಿಮೊಗರು ಮತ್ತು ಜಯರಾಮ ದೇವಸ್ಯ ಭಾಗವಹಿಸಿದ್ದರು. ರಾತ್ರಿ 7 ರಿಂದ ನಾಟ್ಯನಿಲಯ ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯವೃಂದದವರಿಂದ ನೃತ್ಯಾರ್ಪಣಂ ಭರತನಾಟ್ಯ ಮತ್ತು ಜಾನಪದ ನೃತ್ಯ ಕಾರ್ಯಕ್ರಮ ನಡೆಯಿತು.
(ಸಮರಸ ಚಿತ್ರ ಮಾಹಿತಿ: ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಉಳ್ಳಾಕ್ಲು, ಧೂಮಾವತಿ, ರಕ್ತೇಶ್ವರೀ ದೈವಗಳ ಪ್ರತಿಷ್ಠೆ,
3)ವಿದುಷಿ ಸಾವಿತ್ರಿ.ಕೆ.ಭಟ್ ದೊಡ್ಡಮಾಣಿ ಮತ್ತು ಶಿಷ್ಯವೃಂದದವರಿಂದ ಸಂಗೀತ ಕಛೇರಿ,
ನಾರಾಯಣಮಂಗಲದ ವಿಘ್ನೇಶ್ವರ ಯಕ್ಷಗಾನ ಕಲಾಸಂಘ ಇವರಿಂದ ರಣವೀಳ್ಯ ಯಕ್ಷಗಾನ ತಾಳಮದ್ದಳೆ,
5)ರಾತ್ರಿ ನಡೆದ ಶ್ರೀಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ ಗಜೇಂದ್ರ ಮೋಕ್ಷ, ಕಂಸವಧೆ, ರತಿಕಲ್ಯಾಣ ಯಕ್ಷಗಾನ ಬಯಲಾಟ.