ಕಾಸರಗೋಡು: ಜಿಲ್ಲೆಯಲ್ಲಿ ಇಂದು (ಏ.23) ನಡೆಯುವ ಲೋಕಸಭೆ ಚುನಾವಣೆಯಲ್ಲಿ ಮತದಾನ ಶೇಕಡಾ ಹೆಚ್ಚಳಗೊಳ್ಳಬೇಕಿದ್ದು, ಚುನಾವಣೆ ಶಾಂತಿಯುತವಾಗಿ, ಕಾನೂನು ಬದ್ಧವಾಗಿ ನಡೆಯುವ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರುಬೆಂಬಲ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ದಕ್ಷತೆಯಿಂದ ಚುನಾವನೆ ನಡೆಯುವ ಸಲುವಾಗಿ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿವೆ. ವಿಶೇಷ ಚೇತನರ ಮತದಾನಕ್ಕಾಗಿ ಜಿಲ್ಲೆಯಲ್ಲಿ 25 ಆಂಬುಲೆನ್ಸ್ ಸೇವೆ ಇರುವುದು. ಚುನಾವಣೆ ಕರ್ತವ್ಯಕ್ಕಾಗಿ 4,510 ಸಿಬ್ಬಂದಿ, ಕಾನೂನು ಪಾಲನೆಗಾಗಿ 2,641 ಪೊಲೀಸರು ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದಾರೆ.
ಸಮಸ್ಯಾತ್ಮಕ ಮತಗಟ್ಟೆಗಳಲ್ಲಿ ನಿಗಾ ಇರಿಸಲಾಗುತ್ತಿದ್ದು, ಇದಕ್ಕಿರುವ ಸಿದ್ಧತೆಗಳು ಪೂರ್ಣವಾಗಿವೆ. ಅಕ್ರಮಮತದಾನ, ಮತಚಲಾವಣೆಗಾಗಿ ಆಮಿಷ ನೀಡುವಿಕೆ, ಬೆದರಿಕೆ ಹಾಕುವಿಕೆ , ಮತದಾನಕ್ಕೆ ತಡೆ, ಮತಯಂತ್ರಕ್ಕೆ ಹಾನಿ ಮಾಡುವುದು ಇತ್ಯಾದಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು.
ಮತಗಟ್ಟೆಗಳ ಕರ್ತವ್ಯ ಸಿಬ್ಬಂದಿಯ ಕಾಯಕಕ್ಕೆ ತಡೆಮಾಡಿದರೆ 1951ರ ಜನಪ್ರಾತಿನಿಧ್ಯ ಕಾನೂನು ಪ್ರಕಾರ, ಭಾರತೀಯ ದಂಡ ಸಂಹಿತೆ 353 ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಸಿಬ್ಬಂದಿಗೆ ಹಲ್ಲೆ ನಡೆಸಿದರೆ ಐ.ಪಿ.ಸಿ. 332 ಪ್ರಕಾರ ಕೇಸು ದಾಖಲಿಸಲಾಗುವುದು. 2 ವರ್ಷ ಸಜೆ, ದಂಡ ಶಿಕ್ಷೆ ಲಭಿಸುವ ಅಪರಾಧ ಇದಾಗಿದೆ. ಹಲ್ಲೆ ಗಂಭೀರ ಸ್ವರೂಪದ್ದಾಗಿದ್ದರೆ ಐ.ಪಿ.ಸಿ.333 ಪ್ರಕಾರ 10 ವರ್ಷ ಸಜೆ, ದಂಡ ಶಿಕ್ಷೆ ಲಭಿಸಲಿದೆ. ಈ ಆರೋಪದಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಿದರೆ, ಇದಕ್ಕೆ ಜಾಮೀನು ಲಭಿಸದು.