ಮುಳ್ಳೇರಿಯ: ಬೆಳ್ಳೂರು ಪಂಚಾಯಿತಿ ದೊಂಪತ್ತಡ್ಕದಲ್ಲಿ ಕಳೆದ 30 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಕಗ್ಗಲ್ಲು ಕೋರೆಯ ಪರವಾನಗಿ ರದ್ಧು ಗೊಳಿಸಲು ಪಂಚಾಯಿತಿ ಆಡಳಿತ ಸಮಿತಿ ತೀರ್ಮಾನಿಸಿದೆ.
ಕೋರೆ ಪರವಾನಗಿ ರದ್ಧತಿ ಸಂಬಂಧಿಸಿ ಗುರುವಾರ ಪಂಚಾಯಿತಿ ಸಭಾಂಗಣದಲ್ಲಿ ಆಡಳಿತ ಸಮಿತಿ ಸಭೆ ಕರೆಯಲಾಗಿತ್ತು.ಬಿಜೆಪಿಯ ಎಲ್ಲಾ 9 ಪ್ರತಿನಿಧಿಗಳು ಸಭೆಯಲ್ಲಿ ಹಾಜರಾಗಿ ಕೋರೆ ಪರವಾನಗಿ ರದ್ಧತಿಗೆ ಆಗ್ರಹಿಸಿದ್ದರು.ಸಿಪಿಐ(ಎಂ)ನ 4 ಸದಸ್ಯರು ಸಭೆಯಲ್ಲಿ ಹಾಜರಾಗದೆ ಪರವಾನಗಿ ರದ್ಧತಿ ನಿರ್ಣಯ ಸರ್ವಾನುಮತದಿಂದ ಅಂಗೀಕಾರಗೊಂಡಿದೆ.ಬಿಜೆಪಿ ಆಡಳಿತದ ಬೆಳ್ಳೂರು ಗ್ರಾ.ಪಂ.ನಲ್ಲಿ ಪಕ್ಷದ 9 ಹಾಗೂ ಸಿಪಿಐ (ಎಂ) 4 ಒಟ್ಟು 13 ಸದಸ್ಯರಿದ್ದಾರೆ.
ಪರವಾನಗಿ ರದ್ಧತಿ ಪಂಚಾಯಿತಿ ನಿರ್ಣಯ:
ಕಂದಾಯ, ಗಣಿಗಾರಿಕೆ ಭೂವಿ????ನ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಸ್ಪೋಟಕ ಪರವಾನಗಿಯೊಂದಿಗೆ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಾ ಬಂದಿರುವ ದೊಂಪತ್ತಡ್ಕ ಕಗ್ಗಲು ಕೋರೆ ಖನನದಿಂದ ಆಸುಪಾಸು ಪ್ರದೇಶಗಳಲ್ಲಿ ಪ್ರಾಕೃತಿಕ, ಆರೋಗ್ಯ ಸಮಸ್ಯೆ, ನೀರಿನ ಕ್ಷಾಮ ತಲೆದೋರಿದೆ.
ಗಣಿಗಾರಿಕಾ ಪ್ರದೇಶದ ಕೇವಲ ಅರ್ಧ ಕಿ.ಮೀ.ವ್ಯಾಪ್ತಿಯಲ್ಲಿ ಪನೆಯಾಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಆರಾಧನಾಲಯ, ಪರಿಶಿಷ್ಟ ಜಾತಿ ಕಲನಿಗಳಿವೆ. ಕಗ್ಗಲ್ಲು ಒಡೆಯಲು ಬ್ರೇಕರ್ ಯಂತ್ರ, ಭಾರೀ ಸ್ಪೋಟಕಗಳನ್ನು ಬಳಸಲಾಗುತ್ತಿದೆ.ಸ್ಪೋಟದ ಮೊದಲು ಗ್ರಾಮಸ್ಥರಿಗೆ ಸೂಚನೆ ಎಂಬಂತೆ ಸೈರನ್ ಮೊಳಗಿಸಲಾಗುತ್ತಿದ್ದು ಇದರ ಹಾಗೂ ಸ್ಫೋಟದಿಂದ ಉಂಟಾಗುವ ಅತಿಯಾದ ಶಬ್ದ ಒಂದೂವರೆ ಕಿ.ಮೀ.ಸುತ್ತಳತೆಯಲ್ಲಿ ಕೇಳಿಸಬಹುದಾಗಿದೆ.ಸ್ಪೋಟದಿಂದ ಪರಿಸರ ಮಾಲಿನ್ಯ, ಭೂ ಕಂಪನ, ಭೂ ಕುಸಿತ ಉಂಟಾಗಿದ್ದು ಮನೆಗಳು ಬಿರುಕು ಬಿಟ್ಟಿವೆ.ಸ್ಪೋಟದ ವೇಳೆ ಕಗ್ಗಲ್ಲು ಚೂರುಗಳು ಮನೆ ಪರಿಸರಕ್ಕೆ ಎಸೆಯಲ್ಪಟ್ಟ ನಿದರ್ಶನಗಳಿವೆ.
ಸ್ಥಳೀಯರು, ವಿದ್ಯಾರ್ಥಿಗಳು ನಾನಾ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ.ಕೋರೆಯಿಂದ ಕಲ್ಲು ಸಾಗಿಸುವ ಭಾರೀ ಗಾತ್ರದ ಟಿಪ್ಪರ್ ಲಾರಿಗಳು ಹಗಲು ರಾತ್ರಿ ಬದಿಯಡ್ಕ- ಏತಡ್ಕ- ಕಿನ್ನಿಂಗಾರು ರಸ್ತೆಯಲ್ಲಿ ಸಾಗಿಸಬಹುದಾದ ಬಾರಕ್ಕಿಂತಲೂ ಅದೆಷ್ಟೋ ಹೆಚ್ಚು ಪ್ರಮಾಣದ ಕಗ್ಗಲ್ಲು ಸಾಗಿಸುತ್ತಿದ್ದು ರಸ್ತೆ ಸಂಪೂರ್ಣ ಜರ್ಝರಿತವಾಗಿದೆ.ಈ ಬಗ್ಗೆ 2018ರ ಸೆ.22ರಂದು ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ ಪಂಚಾಯಿತಿ ಆಡಳಿತ ಸಮಿತಿ 2018 ಅ.10ರಂದು ಕೋರೆ ಮಾಲಿಕರಿಗೆ ಸ್ಟೋಪ್ ಮೆಮೊ ಕಳುಹಿಸಿದೆ.ಕೋರೆ ಪರಿಸರದಿಂದ ಕೇವಲ 50ಮೀ ದೂರದಲ್ಲಿನ ಪಂಚಾಯಿತಿ ಸ್ಮಶಾನ ಭೂಮಿಗೆ ಕಗ್ಗಲ್ಲು ಚೂರುಗಳು ಎಸೆಯಲ್ಪಟ್ಟಿದೆ.ಸ್ಮಶಾನ ಭೂಮಿಯ 450 ಮೀ.ಭೂಭಾಗವನ್ನು ಕೋರೆ ಮಾಲಿಕರು ಕೈವಶ ಇರಿಸಿದ್ದಾರೆ.ಜನರ ಸುರಕ್ಷೆ ಹಾಗೂ ಪರಿಸರ ಸಂರಕ್ಷಣೆಯನ್ನು ಪರಿಗಣಿಸಿ ಕೋರೆ ಪರವಾನಗಿ ರದ್ದು ಗೊಳಿಸುವ ನಿರ್ಣಯ ಕೈಗೊಳ್ಳಲಾಗಿದೆ.
ಕಗ್ಗಲ್ಲು ಕೋರೆಯ ಪರವಾನಿಗೆ ನವೀಕರಿಸದಂತೆ ಹಾಗೂ ರದ್ದುಗೊಳಿಸಲು ಆಗ್ರಹಿಸಿ ಮಾ.1ರಂದು ಬೆಳ್ಳೂರು- ದೊಂಪತ್ತಡ್ಕ- ಏತಡ್ಕ ಪರಿಸರ ಸಂರಕ್ಷಣಾ ಸಮಿತಿಯಿಂದ ಬೆಳ್ಳೂರು ಪಂಚಾಯತಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆದಿತ್ತು.
ಅಭಿಮತ: 1)
'ಪ್ರಕೃತಿ ಹಾಗೂ ಪರಿಸರದ ಮೇಲೆ ನಿರಂತರವಾಗಿ ನಡೆಯುತ್ತಿರುವ ಮಾನವನ ದೌರ್ಜನ್ಯದ ಪರಿಣಾಮದ ಬಗ್ಗೆ ಸಾಮಾನ್ಯ ಜನರು ತಲೆ ಕೆಡಿಸುತ್ತಿಲ್ಲ.ರಸ್ತೆಗಳ ಶೋಚನೀಯತೆ, ಧೂಳಿನಿಂದಾಗಿ ಉಂಟಾಗುವ ಕಷ್ಟ, ಅನಾರೋಗ್ಯದ ಬಗ್ಗೆಯೂ ಚಿಂತಿಸುತ್ತಿಲ್ಲ.ಕಾನೂನು ಉಲ್ಲಂಘಿಸಿ ನಡೆಯುತ್ತಿರುವ ದೊಂಪತ್ತಡ್ಕ ಕೋರೆ ಗಣಿಗಾರಿಕೆ ಇಡೀ ಗ್ರಾಮವನ್ನೇ ಭೂಪಟದಿಂದ ನಿರ್ನಾಮ ಮಾಡ ಹೊರಟಿದೆ.ಕೋರೆ ವಿರುದ್ಧ ಧ್ವನಿ ಎತ್ತದ ರಾಜಕೀಯ ನೇತಾರರು, ಅಧಿಕಾರಿಗಳು ಗಣಿ ಮಾಫಿಯಾದ ಎಂಜಲು ಕಾಸಿಗೆ ಕೈಯ್ಯೊಡ್ಡಿ ಅವರ ಬೆಂಬಲಕ್ಕೆ ನಿಂತ ಲಜ್ಜೆಗೇಡಿತನ ಪಂಚಾಯಿತಿ ಕೋರೆ ಪರವಾನಹಿ ರದ್ಧತಿ ನಿರ್ಣಯ ಸಮಿತಿ ಸಭೆಯಲ್ಲಿ ಜಗಜ್ಜಾಹೀರಾಗಿದೆ.ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳ ಗಮನಕ್ಕೆ ಈ ವಿಷಯ ತಿಳಿಸಲಾಗಿತ್ತು.ಜನರ ಸುರಕ್ಷೆ, ಊರು ಹಾಗೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿದವರಿಗೆ ನಮ್ಮ ಬೆಂಬಲ.ನಿರ್ಣಯ ಅಂಗೀಕಾರಕ್ಕೆ ಕಾರಣರಾದ ಪಂಚಾಯಿತಿಯ ಎಲ್ಲಾ ಜನಪ್ರತಿನಿಧಿಗಳು, ಈ ಬಗ್ಗೆ ಪಕ್ಷದ ಪ್ರತಿನಿಧಿಗಳಿಗೆ ವಿಪ್ ಹೊರಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾ.ಕೆ.ಶ್ರೀಕಾಂತ್, ಮಂಡಲ ಸಮಿತಿಗೆ ಜನರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ'
ಡಾ.ಮೋಹನ್ ಕುಮಾರ್ ವೈ.ಎಸ್., ಸಾಮಾಜಿಕ ಹೋರಾಟಗಾರ, ಬೆಳ್ಳೂರು- ದೊಂಪತ್ತಡ್ಕ- ಏತಡ್ಕ ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷರು.
...................................................................................................................................
ಅಭಿಮತ:2)
'ಬೆಳ್ಳೂರು ದೊಂಪೆತ್ತಡ್ಕದ ಕಗ್ಗಲ್ಲು ಕೋರೆ ಪರವಾನಿಗೆ ರದ್ಧತಿ ಸಂಬಂಧಿಸಿ ಬಿಜೆಪಿಯ ಮೇಲೆ ಗೂಬೆಕೂರಿಸುವ ಹಲವು ಪ್ರಯತ್ನಗಳು ಈ ಹಿಂದೆ ನಡೆದಿವೆ.ಪರವಾನಗಿ ರದ್ಧತಿ ಸಭೆಯನ್ನು ಬಹಿಷ್ಕರಿಸಿ ಪರೋಕ್ಷವಾಗಿ ಕೋರೆ ಮಾಫಿಯಾದ ಬೆಂಬಲಕ್ಕೆ ನಿಂತ ಸಿಪಿಐ(ಎಂ) ಪಕ್ಷದ ಜನ ಹಾಗೂ ಪ್ರಕೃತಿ ವಿರೋಧಿ ನೀತಿ ಜಗಜ್ಜಾಹೀರು ಗೊಂಡಿದೆ.ಹಾಗೂ ಜನರಿಗೆ ಇದರ ಮನವರಿಕೆಯಾಗಿದೆ'
ನ್ಯಾಯವಾದಿ ಕೆ.ಶ್ರೀಕಾಂತ್
ಬಿಜೆಪಿ ಜಿಲ್ಲಾಧ್ಯಕ್ಷರು.
.................................................................................................................................
ಭಿಮತ: 3)
'ಬಿಜೆಪಿ ಎಂದಿಗೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುತ್ತಾ ಬಂದಿದೆ.ಪ್ರಕೃತಿ ಅಸಮತೋಲನತೆಗೆ ಕಾರಣವಾದ ದೊಂಪತ್ತಡ್ಕ ಕಗ್ಗಲ್ಲ ಕೋರೆ ಪರವಾನಿಗೆ ನವೀಕರಿಸದೇ ಇರುವ ತೀರ್ಮಾನ ಕೈಗೊಂಡ ಪಕ್ಷವು ಬಿಜೆಪಿ ಪ್ರತಿನಿಧಿಗಳಿಗೆ ವಿಪ್ ಜಾರಿಗೊಳಿಸಿ ನಿರ್ಣಯ ಸಭೆಯಲ್ಲಿ ಹಾಜರಿರುವಂತೆ ತಿಳಿಸಿದೆ. ಎಡ, ಐಕ್ಯರಂಗಗಳು ಕೋರೆ ಮಾಲಿಕರಿಂದ ಹಣ ಪಡೆದು ಕೋರೆ ಕಾರ್ಯಾಚರಣೆಗೆ ಅನುಕೂಲಕರ ನಿಲುವು ತಾಳಿ ಜನರಿಗೆ ದ್ರೋಹ ಬಗೆದಿದ್ದಾರೆ'
-ಸುಧಾಮ ಗೋಸಾಡ
ಬಿಜೆಪಿ ಮಂಡಲಾಧ್ಯಕ್ಷರು
.......................................................................................................................................
ಅಭಿಮತ:4)
'ದೊಂಪತ್ತಡ್ಕ ಕಗ್ಗಲ್ಲ ಕೋರೆ ಪರವಾನಗಿ ನವೀಕರಿಸದಿರುವ ಬೆಳ್ಳೂರು ಪಂಚಾಯಿತಿ ಆಡಳಿತ ಮಂಡಳಿ ತೀರ್ಮಾನ ಹರ್ಷ ತಂದಿದೆ.ಬಿಜೆಪಿ ಜಿಲ್ಲಾ ಸಮಿತಿ,ಮಂಡಲ ಸಮಿತಿ, ಪಂಚಾಯಿತಿ ಸಮಿತಿ ಹಾಗೂ ಜನ ಪ್ರತಿನಿಧಿಗಳಿಗೆ ಮಂಡಳಿಗೆ 12 ವಾರ್ಡ್ ಜನರು ಆಭಾರಿಗಳಾಗಿದ್ದೇವೆ'
ಪ್ರೀತಂ ರೈ,
ಪೆರುವತ್ತೋಡಿ(ಕೋರೆ ಪರಿಸರ ನಿವಾಸಿ