ನಮೋ ಟಿವಿ ಉದ್ಘಾಟನೆ; ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವಿವರಣೆ ಕೇಳಿದ ಚು.ಆಯೋಗ
0
ಏಪ್ರಿಲ್ 04, 2019
ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯ ನಂತರ ನಮೋ ಟಿವಿ ಆರಂಭದ ಬಗ್ಗೆ ವರದಿ ಕೇಳಿ ಕೇಂದ್ರ ಚುನಾವಣಾ ಆಯೋಗ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯಕ್ಕೆ ನೊಟೀಸ್ ಜಾರಿ ಮಾಡಿದೆ.
ನಮೊ ಟಿವಿ ಆರಂಭದ ಬಗ್ಗೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ದೂರು ನೀಡಿತ್ತು. ಈ ಹಿನ್ನಲೆಯಲ್ಲಿ ವಿವರಣೆ ಕೇಳಿ ಆಯೋಗ ನೊಟೀಸ್ ಜಾರಿ ಮಾಡಿದೆ.
ಇನ್ನೊಂದೆಡೆ ದೂರದರ್ಶನಕ್ಕೆ ಆಯೋಗ ಪತ್ರ ಬರೆದಿದ್ದು ಮಾರ್ಚ್ 31ರಂದು ಮೈ ಬಿ ಚೌಕಿದಾರ್ ಎಂಬ ಪ್ರಧಾನಿ ಮೋದಿಯವರ ಒಂದು ಗಂಟೆಯ ಭಾಷಣದ ನೇರ ಪ್ರಸಾರ ಮಾಡಿದ ಬಗ್ಗೆ ಕೂಡ ವಿವರಣೆ ಕೇಳಿದೆ.
ಕಳೆದ ಸೋಮವಾರ ಆಮ್ ಆದ್ಮಿ ಪಾರ್ಟಿ ಚುನಾವಣಾ ಆಯೋಗಕ್ಕೆ ದೂರು ನೀಡಿ, ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ನಂತರವೂ ಕೂಡ 24 ಗಂಟೆಗಳ ವಾಹಿನಿ ನಮೋ ಚಾನೆಲ್ ಆರಂಭಕ್ಕೆ ಅನುಮತಿ ನೀಡಲಾಗಿತ್ತೇ ಎಂದು ಕೇಳಿತ್ತು.