ಕಾಸರಗೋಡು: ಕಾಸರಗೋಡು ಲೋಕಸಭೆ ಕ್ಷೇತ್ರದ ಸೂಕ್ಷ್ಮ ಪ್ರದೇಶ ಮತಗಟ್ಟೆಗಳ ಬಗ್ಗೆ ನಿಗಾ ಇರಿಸುವ ನಿಟ್ಟಿನಲ್ಲಿ ನೇಮಕಗೊಂಡಿರುವ ಮೈಕ್ರೋ ಒಬ್ಸರ್ ವರ್ ಗಳಿಗೆ ತರಬೇತಿ ಕಾರ್ಯಕ್ರಮ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಶನಿವಾರ ನಡೆದ ತರಬೇತಿ ಕಾರ್ಯಕ್ರಮಕ್ಕೆ ನಿರೀಕ್ಷಕ ಎಸ್.ಗಣೇಶ್ ನೇತೃತ್ವ ವಹಿಸಿದ್ದರು. ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ನೋಡೆಲ್ ಅಧಿಕಾರಿ ಕೆ.ವಿನೋದ್ ಕುಮಾರ್ ತರಬೇತಿ ನಡೆಸಿದರು.
ಕಾಸರಗೋಡು ಲೋಕಸಭೆ ಕ್ಷೇತ್ರದಲ್ಲಿ ಸೂಕ್ಷ್ಮ ಪ್ರದೇಶಗಳ ಮತಗಟ್ಟೆಗಳೆಂದು 71 ಬೂತ್ ಗಳನ್ನು ಗುರುತಿಸಲಾಗಿದೆ. ಇವುಗಳ ಬಗ್ಗೆ ನಿಗಾ ಇರಿಸಿ ವರದಿ ಸಲ್ಲಿಸುವ ನಿಟ್ಟಿನಲ್ಲಿ ಮೈಕ್ರೋ ಒಬ್ಸರ್ ವರ್ ಗಳನ್ನು ನೇಮಿಸಲಾಗಿದೆ. ಕೇಂದ್ರ ಸರಕಾರಿ ಸಿಬ್ಬಂದಿ, ಕೇಂದ್ರ ಸಾರ್ವಜನಿಕ ಸಂಸ್ಥೆಗಳ ಸಿಬ್ಬಂದಿಯನ್ನು ಈ ನಿಟ್ಟಿನಲ್ಲಿ ನೇಮಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ಕರ್ತವ್ಯಕ್ಕೆ ನೇಮಿಸಲಾದ ಸಿಬ್ಬಂದಿ ತಲಪುವುದರಿಂದ ತೊಡಗಿ ಮತದಾನ ಪ್ರಕ್ರಿಯೆ ಪೂರೈಸಿ ಮರಳುವ ವರೆಗಿನ ವಿಚಾರಗಳನ್ನು ಮೈಕ್ರೋ ಒಬ್ಸರ್ ವರ್ ಗಳು ನಿಗಾ ಇರಿಸಿ ವರದಿ ಮಾಡಬೇಕು. ಮೋಕ್ ಮತದಾನ ಚಟುವಟಿಕೆ, ಹಾಜರಿರುವ ಏಜೆಂಟರು, ಮತಗಟ್ಟೆ ಪ್ರದೇಶದ ಮೂಲಭೂತ ಸೌಲಭ್ಯಗಳು, ಅಕ್ರಮ ಮತದಾನಕ್ಕೆ ನಡೆಸಲಾದ ಯತ್ನಗಳು, ಸಿಬ್ಬಂದಿಯ ಕರ್ತವ್ಯ ಸಹಿತ ಎಲ್ಲ ವಿಚಾರಗಳ ಬಗ್ಗೆ ಇವರು ನಿಗಾ ಇರಿಸುವರು.