ದೇವರೊಲುಮೆಯಿಂದ ಜಗತ್ತಿನಲ್ಲಿ ಎಲ್ಲವೂ ಸಾಧ್ಯ-ವಸಂತ ಪೈ
0
ಏಪ್ರಿಲ್ 05, 2019
ವಳಮಲೆಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ
ಬದಿಯಡ್ಕ: ದೇವರೊಲುಮೆಯಿಂದ ಈ ಜಗತ್ತಿನಲ್ಲಿ ಎಲ್ಲವೂ ಸಾಧ್ಯ. ನಾನು ನನ್ನದು ನನ್ನಿಂದಾದುದು ಎಂಬ ಸ್ವಾರ್ಥ ಚಿಂತನೆಯಿಂದ ಹೊರಬಂದು ಸಮಷ್ಟಿಯ ಹಿತವನ್ನು ಬಯಸಿ, ಸಾತ್ವಿಕವಾದ ಜೀವನವನ್ನು ಭಕ್ತಿ ಶ್ರದ್ಧೆಯಿಂದ ಮಾತ್ರ ರೂಪಿಸಿಕೊಳ್ಳಲು ಸಾಧ್ಯ. ದೈವ ದೇವರುಗಳ ಬಗೆಗಿನ ಭಕ್ತಿ ಶ್ರದ್ದೆ ಹಾಗೂ ನಿಸ್ವಾರ್ಥ ಸೇವೆಯಿಂದ ಜನ್ಮಾಂತರಗಳ ಪುಣ್ಯ ಸಂಪಾದನೆ ಸಾಧ್ಯ. ಬದಿಯಡ್ಕ ಪೇಟೆಯ ಹೃದಯ ಭಾಗದಲ್ಲಿರುವ ಈ ದೈವಸ್ಥಾನವು ಐತಿಹಾಸಿಕ ಹಿನ್ನಲೆಯನ್ನು ಹೊಂದಿದ್ದು ಕಾರಣಿಕದ ಪುಣ್ಯ ಭೂಮಿಯಾಗಿದೆ. ಆದುದರಿಂದ ನಮ್ಮ ಪಾಲಿನ ಸಂರಕ್ಷಕರಾಗಿರುವ ದೈವಗಳ ಸೇವೆಯನ್ನು ನಿಸ್ವಾರ್ಥ ಮನೋಭಾವದಿಂದ ಕೈಗೊಂಡು ಯಶಸ್ವಿಯಾಗಿ ಎಲ್ಲವೂ ನಡೆಯುವಂತೆ ನೋಡಿಕೊಳ್ಳಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಉದ್ಯಮಿ, ಪ್ರತಿಷ್ಠಾ ಮಹೋತ್ಸವದ ಗೌರವಾಧ್ಯಕ್ಷರಾದ ವಸಂತ ಪೈ ಬದಿಯಡ್ಕ ಕರೆ ನೀಡಿದರು.
ಅವರು ಬದಿಯಡ್ಕ ವಳಮಲೆಯ ಶ್ರೀ ಅಣ್ಣಪ್ಪ ಪಂಜುರ್ಲಿ, ಮೂಕಾಂಬಿಕಾ ಗುಳಿಗ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಎ.27 ರಿಂದ 30 ವರೆಗೆ ನಡೆಯಲಿರುವ ಪುನಃಪ್ರತಿಷ್ಠೆ ಕಲಶೋತ್ಸವ ಹಾಗೂ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರತಿಷ್ಠಾ ಮಹೋತ್ಸವದ ಅಧ್ಯಕ್ಷ ಶಂಕರ ಅಧ್ಯಕ್ಷತೆ ವಹಿಸಿದರು. ಮುಖ್ಯ ಅಥಿತಿಯಾಗಿ ಡಾ. ಶ್ರೀನಿಧಿ ಸರಳಾಯ ಮಾತನಾಡಿದರು. ಹಿರಿಯರಾದ ಚನಿಯ ಮಿಂಚಿನಡ್ಕ ಶುಭಾಶಂಸನೆಗೈದರು. ಪ್ರತಿಷ್ಠಾ ಮಹೋತ್ಸವದ ಗೌರವ ಕಾರ್ಯದರ್ಶಿ ವಿಶ್ವನಾಥ ಪ್ರಭು ಕರಿಂಬಿಲ ಸ್ವಾಗತಿಸಿ, ವಿಜಯ ವಂದಿಸಿದರು. ರವಿಕಾಂತ್ ಕೇಸರಿ ಕಾರ್ಯಕ್ರಮ ನಿರೂಪಿಸಿದರು. ದೈವಗಳ ಪ್ರತಿಷ್ಠಾ ಮಹೋತ್ಸವದ ವಿವಿಧ ಸಮಿತಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.