ಆಮ್‍ಸ್ಟರ್‍ಡ್ಯಾಮ್: ಕೆಲವೊಮ್ಮೆ ಪದಗಳಲ್ಲಿ ಹೇಳಲು ಆಗದನ್ನು ಒಂದು ಫೋಟೋ ವಿವರಿಸುತ್ತದೆ. ಅದಕ್ಕೆ ಸಾಕ್ಷಿಯೆಂಬಂತೆ ಈ ಒಂದು ಫೋಟೋ ಜಗತ್ತಿನಾದ್ಯಂತ ಗಮನ ಸೆಳೆದಿತ್ತು. ಈ ಫೋಟೋದಲ್ಲಿ ಕಾಣದ ನೋವಿದೆ. ಈ ಮನಕಲಕುವ ದೃಶ್ಯ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮನಮುಟ್ಟಿತೆ ಗೊತ್ತಿಲ್ಲ.
ಜಾನ್ ಮೂರೆ ಎನ್ನುವ ಹಿರಿಯ ಛಾಯಾಚಿತ್ರಗಾರ ತಾಯಿ ಸಾಂಡ್ರಾ ಸ್ಯಾಂಚೆಜ್ ರಿಂದ ಮಗು ಯನೇಲಾಳನ್ನು ಭದ್ರತಾ ಅಧಿಕಾರಿಗಳು ಬೇರ್ಪಡಿಸುವ ಸಂದರ್ಭದಲ್ಲಿ ಈ ಫೋಟೋವನ್ನು ಕ್ಲಿಕ್ಕಿಸಿದ್ದರು. ಈ ಮನಕಲುಕುವ ಫೋಟೋ ಇದೀಗ ಈ ವರ್ಷದ ವಲ್ರ್ಡ್ ಪ್ರೆಸ್ ಫೋಟೋ ಪ್ರಶಸ್ತಿ ಗೆದ್ದಿದೆ.
ತಾಯಿಯ ಕಾಲ ಬಳಿ ಅಸಾಯಕವಾಗಿ ನಿಂತಿರುವ ಮಗುವಿನ ಮುಖದಲ್ಲಿ ನೋವು, ಭಯ, ಹತಾಶೆ ಎಲ್ಲವೂ ಮಿಳಿತವಾಗಿದೆ. ಅಮ್ಮನನ್ನು ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದರೆ ಮಗು ಅಳುತ್ತಾ ದಿಕ್ಕೆ ತೋಚದೆ ನಿಂತಿರುವ ಈ ದೃಶ್ಯ ಕಲ್ಲು ಹೃದಯದ ಮನಸ್ಸಿನವರೂ ಮರುಗುವಂತಿದೆ.
ಮೆಕ್ಸಿಕೋ-ಅಮೆರಿಕ ಗಡಿಯ ಮೂಲಕವಾಗಿ ಪ್ರತಿವರ್ಷ ಹಲವಾರು ಮಂದಿ ಅನಧಿಕೃತವಾಗಿ ಅಮೆರಿಕವನ್ನು ಪ್ರವೇಶಿಸುತ್ತಾರೆ. ಈ ವೇಳೆ ಸಿಕ್ಕಿಬಿದ್ದವರನ್ನು ಜೈಲಿಗಟ್ಟಲಾಗುತ್ತದೆ. ಅನಧಿಕೃತವಾಗಿ ಗಡಿ ದಾಟಿ ಬಂದವರಲ್ಲಿ ಮಗು ಹಾಗೂ ತಾಯಿ ಇದ್ದರೆ ಇಬ್ಬರನ್ನೂ ಪ್ರತ್ಯೇಕಿಸಿ ಬೇರೆ ಬೇರೆಯಾಗಿ ಜೈಲು ಶಿಕ್ಷೆ ನೀಡಲಾಗುತ್ತದೆ. ಈ ನಿಮಯ ವಿಶ್ವಮಟ್ಟದಲ್ಲಿ ಸಾಕಷ್ಟು ಪ್ರತಿರೋಧಕ್ಕೂ ಕಾರಣವಾಗಿತ್ತು.
1955ರಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಛಾಯಾಚಿತ್ರವನ್ನು ತೆಗೆಯುವ ಫೋಟೋಗ್ರಾಫರ್ ಗಳಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿ. ವಿಶ್ವದ ಅತಿದೊಡ್ಡ ಛಾಯಾಚಿತ್ರ ಪ್ರಶಸ್ತಿಯಲ್ಲಿ ದೃಶ್ಯದ ಸೃಜನಶೀಲತೆ, ಛಾಯಾಚಿತ್ರಗಾರನ ಕೌಶಲ್ಯವನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ.