ಬದಿಯಡ್ಕ: ಹಿಂದೂ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ಜನಸೇವಾ ವಿಶ್ವಸ್ಥ ನಿಧಿಯ ನೇತೃತ್ವದಲ್ಲಿ ನೀರ್ಚಾಲು ಸಮಿಪದ ಕನ್ನೆಪ್ಪಾಡಿ `ಆಶ್ರಯ'ದಲ್ಲಿ ನಡೆದುಬರುತ್ತಿರುವ ಶಿಶುಮಂದಿರ ಹಾಗೂ ಶ್ರೀ ಉದನೇಶ್ವರ ಬಾಲಗೋಕುಲದ ವಾರ್ಷಿಕೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಂದಿಗೆ ಇತ್ತೀಚೆಗೆ ನಡೆಯಿತು.
ಬೆಳಿಗ್ಗೆ ಬಾಲಗೋಕುಲದ ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭವಾಯಿತು. ಶಿಶುಮಂದಿರದ ಶಿಕ್ಷಕಿ ಜ್ಯೋತಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿವೃತ್ತ ಅಧ್ಯಾಪಕ ಗೋಪಾಲಕೃಷ್ಣ ಭಟ್ ಮಲ್ಲಡ್ಕ ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು. ಆಡಳಿತ ಸಮಿತಿಯ ಗಣೇಶ ಕೃಷ್ಣ ಅಳಕ್ಕೆ ಹಾಗೂ ಶ್ರೀಕೃಷ್ಣ ಭಟ್ ಪುದುಕೋಳಿ ಉಪಸ್ಥಿತರಿದ್ದರು. ರಮ್ಯಾ ವಂದಿಸಿದರು. ಸಭಾಕಾರ್ಯಕ್ರಮದ ನಂತರ ಪುಟಾಣಿಗಳಿಂದ ವಿವಿಧ ವಿನೋದಾವಳಿಗಳು ಪ್ರದರ್ಶನಗೊಂಡವು. ಬಾಲಗೋಕುಲದ ಮಕ್ಕಳು ತಮ್ಮ ಪ್ರತಿಭೆಯನ್ನು ಮೆರೆದರು. ಮಧ್ಯಾಹ್ನ ಭೋಜನವನ್ನು ಏರ್ಪಡಿಸಲಾಗಿತ್ತು.
ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಅಧ್ಯಾಪಕ ಸದಾಶಿವ ಅರಿಯಪ್ಪಾಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಬಾಲ್ಯದಲ್ಲಿಯೇ ಮಕ್ಕಳಿಗೆ ಸಂಸ್ಕಾರವನ್ನು ನೀಡಿದರೆ ಅವರು ಮುಂದೆ ಭಾರತದ ಉತ್ತಮ ಪ್ರಜೆಯಾಗಿ ಬದಲಾಗುತ್ತಾರೆ. ಹಿರಿಯರಿಗೆ ಗೌರವ ನೀಡುವುದನ್ನು ಎಳವೆಯಲ್ಲಿಯೇ ಅಳವಡಿಸಿಕೊಳ್ಳಬೇಕು. ಆಧುನಿಕ ಕಾಲಘಟ್ಟದಲ್ಲಿ ಮೊಬೈಲ್‍ನ ದಾಸರಾಗುವ ಮಕ್ಕಳನ್ನು ತಿದ್ದಬೇಕಾದ ಅನಿವಾರ್ಯತೆ ಇದೆ. ಮಕ್ಕಳ ಮುಂದೆ ಪಾಲಕರು ಅನಗತ್ಯವಾಗಿ ಮೊಬೈಲ್ ಬಳಕೆ ಮಾಡುವುದರಿಂದ ಮಕ್ಕಳಿಗೆ ಅದರಲ್ಲಿ ಕುತೂಹಲ ಮೂಡುವುದು ಸಹಜ. ಈ ನಿಟ್ಟಿನಲ್ಲಿ ಪಾಲಕರು ಜಾಗ್ರತೆವಹಿಸಬೇಕಾಗಿದೆ ಎಂಬ ಹಿತವಚನಗಳನ್ನಾಡಿದರು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳಿಗೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮೇಘಶ್ರೀ ಸ್ವಾಗತಿಸಿ, ಚಿತ್ರಕಲಾ ಶಾಂತಿಪಳ್ಳ ವಂದಿಸಿದರು. ಕುಟುಂಬಶ್ರೀ ಸದಸ್ಯರು, ಪಾಲಕರು, ಆಡಳಿತ ಸಮಿತಿಯ ಸದಸ್ಯರು, ಹಿತೈಷಿಗಳು ಪಾಲ್ಗೊಂಡಿದ್ದರು.