ಶಾಲೆಯ ಪ್ರಗತಿಗೆ ಮಕ್ಕಳೇ ಮೂಲಾಧಾರ- ಪ್ರಗತಿಶೀಲ ಕೃಷಿಕ ಪತ್ತಡ್ಕ ಗಣಪತಿ ಭಟ್
0
ಏಪ್ರಿಲ್ 01, 2019
ಕುಂಬಳೆ: ವಿದ್ಯಾಸಂಸ್ಥೆಗೆ ಕೋಟಿಗಟ್ಟಲೆ ಧನಸಹಾಯ ನೀಡುವ ದಾನಿಗಳು ಲಭ್ಯವಾದರೂ ಅಲ್ಲಿ ವಿದ್ಯಾರ್ಜನೆ ಮಾಡುವ ಮಕ್ಕಳ ಸಂಖ್ಯೆ ಸಾಕಷ್ಟು ಇಲ್ಲದೆ ಹೋದಲ್ಲಿ ಅದು ಪ್ರಗತಿಯಾಗದು. ಈ ನಿಟ್ಟಿನಲ್ಲಿ ವಿದ್ಯಾರ್ಜನೆಗೊಂಡು ತೆರಳುವ ಹತ್ತನೇ ತರಗತಿ ವಿದ್ಯಾರ್ಥಿಗಳ ಸಹಾಯ ಈ ಶಾಲೆಗೆ ಅನಿವಾರ್ಯ. ಈ ಊರಿನಲ್ಲಿರುವ ಪ್ರತಿಮನೆಯಿಂದ ವಿದ್ಯಾಲಯಕ್ಕೆ ಸೇರ್ಪಡೆಗೊಳ್ಳುವಂತೆ ಪ್ರೇರೇಪಿಸುವ ಸಹಾಯಹಸ್ತ ಆಗಬೇಕು ಎಂದು
ಶನಿವಾರ ಮುಜುಂಗಾವಿನ ಶ್ರೀಭಾರತೀ ವಿದ್ಯಾಪೀಠದಲ್ಲಿ ಆಯೋಜಿಸಲಾಗಿದ್ದ 2018-19 ನೇ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ 'ಸ್ಪಂಧನ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಅವರು ಮಾತನಾಡಿದರು.
ಪ್ರಾಥಮಿಕ ವಿದ್ಯಾಭ್ಯಾಸವು ವ್ಯಕ್ತಿಯೊಬ್ಬನ ಬದುಕಿನ ಮಹತ್ತರ ಘಟ್ಟವಾಗಿದ್ದು, ಜೀವನದಲ್ಲಿ ಯಾವ ಎತ್ತರಕ್ಕೇರಿದರೂ ಅಮತಹ ಶಿಕ್ಷಣ ನೀಡಿದ ಶಾಲೆಯನ್ನು ಮರೆಯುವಂತಿಲ್ಲ. ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಸಹೃದಯರ ನೆರವು ಸಾಕಷ್ಟಿದ್ದಲ್ಲಿ ಸಾಮಾನ್ಯ ಮಂದಿಗಳಿಗೆ ಗುಣಮಟ್ಟದ ಶಿಕ್ಷಣ ಲಭ್ಯವಾಗುವುದು ಎಮದು ಅವರು ತಿಳಿಸಿದರು.
ವೇದಿಕೆಯಲ್ಲಿ ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಎಸ್.ಎನ್.ರಾವ್ ಮುನ್ನಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಸಮಿತಿ ಕಾರ್ಯದರ್ಶಿ ಶ್ಯಾಮರಾಜ ದೊಡ್ಡಮಾಣಿ, ಆಡಳಿತಾಧಿಕಾರಿ ಶ್ಯಾಂಭಟ್ ದರ್ಭೆಮಾರ್ಗ, ಮುಖ್ಯೋಪಾಧ್ಯಾಯಿನಿ ಚಿತ್ರಾಸರಸ್ವತಿ ಪೆರಡಾನ ಹಾಗೂ ಹತ್ತನೇ ತರಗತಿ ಶಿಕ್ಷಕಿ ಪ್ರತೀಕ್ಷಾ ಮಾತಾಶ್ರೀ ಉಪಸ್ಥಿತರಿದ್ದು ಶುಭಹಾರೈಸಿದರು. ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ಅನಿಸಿಕೆ ಅನುಭವಗಳನ್ನು ವ್ಯಕ್ತಪಡಿಸಿದರು. ಮಕ್ಕಳ ಮುಂದಿನ ಭವಿಷ್ಯ ಬೆಳಗಬೇಕೆಂಬ ದ್ಯೋತಕವಾಗಿ ಶಾಲಾವತಿಯಿಂದ ಮಕ್ಕಳಿಗೆ ಬೆಳಗುವ ದೀಪಗಳನ್ನು ಈ ಸಂದರ್ಭ ನೀಡಲಾಯಿತು.
ಹತ್ತನೇ ತರಗತಿ ವಿದ್ಯಾರ್ಥಿಗಳು ತಮ್ಮ ಪ್ರೀತಿಯ ದ್ಯೋತಕವಾಗಿ ಶಾಲೆಗೆ ಧ್ವನಿವರ್ಧಕ ಕೊಡುಗೆಯನ್ನು ಹಸ್ತಾಂತರಿಸಿದರು. ವಿದ್ಯಾರ್ಥಿಗಳಾದ ವೈಶಾಲಿ ಸ್ವಾಗತಿಸಿ, ವಿಷ್ಣು ಕಿರಣ ವಂದಿಸಿದರು. ಮಧುರಾ ಕಾರ್ಯಕ್ರಮದ ನಿರೂಪಿಸಿದರು.