ಬದಿಯಡ್ಕ: ಸಾಹಿತಿ, ಸಂಶೋಧಕ, ಅಧ್ಯಾಪಕ ದಿ. ಪಿ.ಕೆ.ಶ್ರೀಕೃಷ್ಣ ಭಟ್ ಪಂಜಿತ್ತಡ್ಕ ಅವರ ಸಂಸ್ಮರಣೆ ಹಾಗೂ ಕಾಸರಗೋಡಿನ ಕನ್ನಡಿಗರ ಜನಪದ ನಂಬಿಕೆಗಳು ಎಂಬ ಸಂಶೋಧನಾ ಕೃತಿಯ ಬಿಡುಗಡೆ ಕಾರ್ಯಕ್ರಮವು ಏ.18 ರಂದು ಗುರುವಾರ ಅಪರಾಹ್ನ 2.30ಕ್ಕೆ ಪೆರಡಾಲ ದೇವಸ್ಥಾನ ಸಮೀಪ ಪಂಜಿತ್ತಡ್ಕದ ಶ್ರೀಕೃಷ್ಣ ನಿಲಯದಲ್ಲಿ ನಡೆಯಲಿದೆ. ಶ್ರೀಯುತರ ಪತ್ನಿ ಸೀತಾಲಕ್ಷ್ಮಿ ಪಂಜಿತ್ತಡ್ಕ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
ಬದಿಯಡ್ಕ ಶ್ರೀಭಾರತಿ ವಿದ್ಯಾಪೀಠದ ಪ್ರಾಂಶುಪಾಲ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಡಾ.ಹರಿಕೃಷ್ಣ ಭರಣ್ಯ ಸಂಸ್ಮರಣಾ ಭಾಷಣ ಮಾಡುವರು. ಪಿಕೆಶ್ರೀ ಎಂಬ ಕಾವ್ಯನಾಮವನ್ನಿಟ್ಟುಕೊಂಡು ಸಾಕಷ್ಟು ಸಾಹಿತ್ಯಸೇವೆ ಮಾಡಿದ್ದ ದಿ.ಪಿ.ಕೆ.ಶ್ರೀಕೃಷ್ಣ ಭಟ್ ಪಂಜಿತ್ತಡ್ಕ ಅವರ ಸಂಶೋಧನಾ ಕೃತಿ ಕಾಸರಗೋಡಿನ ಕನ್ನಡಿಗರ ಜನಪದ ನಂಬಿಕೆಗಳು ಕೃತಿಯನ್ನು ಶಂಕರನ್ ನಂಬಿಯಾರ್ ಅವರು ಬಿಡುಗಡೆಗೊಳಿಸುವರು. ಕಾರ್ಯಕ್ರಮದಲ್ಲಿ ಪಿಕೆಶ್ರೀ ಅವರ ವಿದ್ಯಾರ್ಥಿಗಳಾಗಿದ್ದ ರವೀಶ ತಂತ್ರಿ ಕುಂಟಾರು, ಲಕ್ಷ್ಮಿ ಎಂ ಎ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶ್ರೀಯುತರ ಬಂಧುಗಳು, ಸ್ನೇಹಿತರು, ಒಡನಾಡಿಗಳು, ಸಾಹಿತ್ಯಾಸಕ್ತರು ಪಾಲ್ಗೊಂಡು, ತಮ್ಮ ಮನದಾಳದ ನೆನಪುಗಳನ್ನು ಬಿಚ್ಚಿಡುವರು. ಶ್ರೀಶ ಕುಮಾರ ಪಂಜಿತ್ತಡ್ಕ, ಸುಮಂಗಲ ಶಿವರಾಮ ಭಟ್ ಮುಳಿಯಾಲ, ಡಾ. ರತ್ನಾಕರ ಮಲ್ಲಮೂಲೆ ಮೊದಲಾದವರು ಉಪಸ್ಥಿತರಿರುವರು.
ಕಾರ್ಯಕ್ರಮದ ದಿನ ಉಪಸ್ಥಿತರಿರುವ ಶಾಲಾ ಕಾಲೇಜುಗಳ ಪ್ರತಿನಿಧಿಗಳ ಮೂಲಕ ಗ್ರಂಥಾಲಯಕ್ಕೆ ಪುಸ್ತಕವನ್ನು ಉಚಿತವಾಗಿ ನೀಡಲಾಗುವುದು.
ಶಿಕ್ಷಕರಾಗಿದ್ದ ದಿ.ಪಿ.ಕೆ.ಶ್ರೀಕೃಷ್ಣ ಭಟ್ ಹಲವು ಕೃತಿಗಳನ್ನು ರಚಿಸಿದ್ದು, ಈ ಪೈಕಿ 1982ರಲ್ಲಿ ಮದರಾಸು ವಿವಿಗೆ ಎಂ.ಫಿಲ್ ಪದವಿಗಾಗಿ ಸಮರ್ಪಿಸಿದ ಮಹತ್ವದ ಕೃತಿ ಕಾಸರಗೋಡಿನ ಕನ್ನಡಿಗರ ಜನಪದ ನಂಬಿಕೆಗಳು ಕೃತಿಯಲ್ಲಿದೆ. ಜನಪದ, ನಂಬಿಕೆಗಳ ಕುರಿತಾದ ಇತಿಹಾಸದ ಉಲ್ಲೇಖ ಈ ಕೃತಿಯಲ್ಲಿದ್ದು, ಕಾಸರಗೋಡಿನಾದ್ಯಂತ ಪ್ರಚಲಿತವಿದ್ದ ಜನಪದ ನಂಬಿಕೆಗಳನ್ನು ಕ್ಷೇತ್ರಕಾರ್ಯದ ಮೂಲಕ ಸಂಗ್ರಹಿಸಿ, ವಿಶ್ಲೇಷಿಸಿ ವಿಮರ್ಶಾತ್ಮಕವಾಗಿ ಬರೆಯಲಾದ ಪ್ರಬಂಧ ಇದಾಗಿದೆ. ತಮ್ಮ ಪಿಎಚ್‍ಡಿ ಅಧ್ಯಯನಕ್ಕಾಗಿ ಕುಮಾರವ್ಯಾಸ ಮತ್ತು ತುಂಜತ್ತೆಳುತ್ತಚ್ಛನ್ ಮಹಾಭಾರತಗಳಲ್ಲಿ ಭಕ್ತಿ ಎಂಬ ಕೃತಿಯನ್ನು ರಚಿಸಿದ್ದು ಈ ಮಧ್ಯೆ 1989 ಏಪ್ರಿಲ್ 19ರಂದು ಮುಳ್ಳೇರಿಯ ಸಮೀಪ ದೇಲಂಪಾಡಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೊಳಗಾದ್ದರಿಂದ ಆ ಕೃತಿ ಅಪೂರ್ಣವಾಗಿ ಉಳಿದಿದೆ.