ವಿಶೇಷ ಚೇತನ ಮತದಾರರ ಹಕ್ಕು ಖಚಿತಪಡಿಸಲು ಕ್ರಮ
0
ಏಪ್ರಿಲ್ 01, 2019
ಕಾಸರಗೋಡು: ಲೋಕಸಭಾ ಚುನಾವಣೆ ಅಂಗವಾಗಿ ವಿಶೇಷಚೇತನ ಮತದಾರರ ಮತದಾನ ಹಕ್ಕು ಖಚಿತಪಡಿಸುವ ನಿಟ್ಟಿನಲ್ಲಿ ಮತ್ತು ಇವರನ್ನು ಮತಗಟ್ಟೆಗಳಿಗೆ ಕರೆತರುವ ನಿಟ್ಟಿನಲ್ಲಿ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ನಡೆಸಲಾಗುವುದು ಎಂದು ಈ ಸಂಬಂಧ ನಡೆದ ಸಭೆ ತಿಳಿಸಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಹೆಚ್ಚುವರಿ ದಂಡನಾಧಿಕಾರಿ ಸಿ.ಬಿಜು ಅಧ್ಯಕ್ಷತೆ ವಹಿಸಿದ್ದರು. ಮತಗಟ್ಟೆಗಳಲ್ಲಿ ವಿಶೇಷಚೇತನರಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಏರ್ಪಡಿಸುವ ನಿಟ್ಟಿನಲ್ಲಿ, ಮತಗಟ್ಟೆಗಳಿಗೆ ಕರೆತರುವ ಮತ್ತು ಮರಳಿಸುವ ನಿಟ್ಟಿನಲ್ಲಿ ಸ್ವಯಂಸೇವಕರನ್ನು ನೇಮಕಗೊಳಿಸಲಾಗುವುದು. ಇದಕ್ಕಾಗಿ ಜಿಲ್ಲೆಯ 50 ಶಾಲೆಗಳ ಎನ್.ಎಸ್.ಎಸ್. ವಿದ್ಯಾರ್ಥಿಗಳನ್ನು, ಯೂತ್ ಕ್ಲಬ್, ನೆಹರೂ ಯುವ ಕೇಂದ್ರ, ಆಶಾ ವರ್ಕರ್ಸ್, ವಿದ್ಯಾರ್ಥಿ ಪೊಲೀಸ್ ಸಹಿತ ಸಂಘಟನೆಗಳ ಕಾರ್ಯಕರ್ತರ ಸೇವೆಯನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಲಾಯಿತು.
ಜೊತೆಗೆ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಮಂಜೂರು ಮಾಡಿರುವ ಆಂಬುಲೆನ್ಸ್ಗಳನ್ನು ಈ ವಿಚಾರಕ್ಕಾಗಿ ಬಳಸಲಾಗುವುದು. ವಿಶೇಷಚೇತನರ ಹೆಸರು, ಮಾಹಿತಿ ಇತ್ಯಾದಿಗಳನ್ನು ಆಯಾ ತಾಲೂಕು ಮಟ್ಟದಲ್ಲಿ ಸಂಗ್ರಹಿಸಿ, ಅವನ್ನು ಚುನಾವಣೆ ವಿಭಾಗಕ್ಕೆ ಹಸ್ತಾಂತರಿಸಲು ಆಯಾ ತಹಸೀಲ್ದಾರರಿಗೆ ಹೊಣೆ ನೀಡಲಾಗಿದೆ. ವಿಕಲಚೇತನ ಮತದಾರರ ನೋಡೆಲ್ ಅಧಿಕಾರಿ ಪಿ.ಬಿಜು ಅವರಿಗೆ ಹಸ್ತಾಂತರಿಸಲು ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ವಿ.ಪಿ.ಅಬ್ದು ರಹಮಾನ್, ನೋಡೆಲ್ ಅಧಿಕಾರಿ ಪಿ.ಬಿಜು, ಚುನಾವನೆ ವಿಭಾಗ ಕಿರಿಯ ವರಿಷ್ಠಾಧಿಕಾರಿ ಎಸ್.ಗೋವಿಂದನ್, ಸಹಾಯಕ ಚುನಾವಣೆ ಅಧಿಕಾರಿಗಳು, ತಹಸೀಲ್ದಾರರು, ಜಿಲ್ಲಾ ಕಾರ್ಯಕ್ರಮ ಅಧಿಕಾರಿ, ಅಭಿವೃದ್ಧಿ ಯೋಜನೆ ಅಧಿಕಾರಿಗಳು, ಮೇಲ್ವಿಚರಕರು, ಆಶಾ ಸಂಚಾಲಕರು, ಎಸ್.ಪಿ.ಸಿ.ಕೆಡೆಟ್ ಗಳು, ಯೂತ್ ವೆಲ್ ಫೇರ್ ಪ್ರೋಗ್ರಾಂ ಅಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.