ಕುಂಬಳೆ: ರಾಜಕೀಯದಲ್ಲಿ ಜಾಣರೆಂದು ಗುರುತಿಸಿಕೊಂಡಿರುವ ಕೇರಳದಲ್ಲಿ ಬರೋಬರಿ ಮೂರು ಡಜನ್‍ಗಿಂತಲೂ ಅಧಿಕ ರಾಜಕೀಯ ಪಕ್ಷಗಳಿವೆ.
ರಾಷ್ಟ್ರೀಯ ಪಕ್ಷಗಳು, ರಾಜ್ಯಮಟ್ಟದ ಪ್ರಾದೇಶಿಕ ಪಕ್ಷಗಳು ಮತ್ತು ಕೇಂದ್ರ ಚುನಾವಣಾ ಆಯೋಗದ ಅಂಗೀಕಾರ ಪಡೆದ ಪಕ್ಷಗಳು ಸೇರಿದಂತೆ ರಾಜ್ಯದಲ್ಲಿ ಮೂರು ಡಜನ್‍ಗಿಂತಲೂ ಹೆಚ್ಚು ರಾಜಕೀಯ ಪಕ್ಷಗಳಿವೆ.
ಬಿಜೆಪಿ, ಸಿಪಿಐ, ಸಿಪಿಎಂ, ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಮತ್ತು ಎನ್‍ಸಿಪಿ ಎಂಬ ರಾಜಕೀಯ ಪಕ್ಷಗಳು, ಜನತಾದಳ (ಸೆಕ್ಯುಲರ್), ಕೇರಳ ಕಾಂಗ್ರೆಸ್ (ಎಂ) ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕೇರಳದಲ್ಲಿ ಪ್ರಾದೇಶಿಕ ಪಕ್ಷಗಳನ್ನಾಗಿ ಚುನಾವಣಾ ಆಯೋಗ ಅಂಗೀಕರಿಸಿದೆ.
ಇದರ ಹೊರತಾಗಿ ಸಿಎಂಪಿ, ಜೆಎಸ್‍ಎಸ್, ಕಾಂಗ್ರೆಸ್ ಸೆಕ್ಯುಲರ್, ಸೋಶ್ಯಲಿಸ್ಟ್ ಜನತಾ, ಆರ್‍ಎಸ್‍ಪಿ (ಬೇಬಿ ಜೋನ್), ಆರ್‍ಎಸ್‍ಪಿ (ಮಾಕ್ರ್ಸಿಸ್ಟ್-ಬಿ), ಕೇರಳಾ ಕಾಂಗ್ರೆಸ್ (ಬಿ), ಕೇರಳ ಕಾಂಗ್ರೆಸ್ (ಜೆ), ಕೇರಳ ಕಾಂಗ್ರೆಸ್ ಸೆಕ್ಯುಲರ್, ಪಿಡಿಪಿ, ಆಲ್ ಕೇರಳ ಎಂಜಿಆರ್ ದ್ರಾವಿಡ ಮುನ್ನೇಟ ಪಾರ್ಟಿ, ಭಾರತೀಯ ಜನಶಬ್ದ್, ದೇಶಿಯಪ್ರಜಾ ಸೋಶ್ಯಲಿಸ್ಟ್ ಪಾರ್ಟಿ, ಇಂಡಿಯನ್ ಗಾಂಧಿಯನ್ ಪಾರ್ಟಿ, ಕೇರಳ ಜನಪಕ್ಷಂ, ನ್ಯಾಶನಲ್ ಡೆಮೋಕ್ರಾಟಿಕ್ ಪಾರ್ಟಿ, ನ್ಯಾಶನಲ್ ಸೆಕ್ಯುಲರ್ ಕಾನ್ಪರೆನ್ಸ್, ನಿಶಬ್ದ್ ಬೂರಿಪಕ್ಷ, ಸೆಕ್ಯುಲರ್ ದ್ರಾವಿಡ್ ಪಾರ್ಟಿ, ಸೋಶ್ಯಲ್ ಆ್ಯಕ್ಷನ್ ಪಾರ್ಟಿ, ಸೋಶ್ಯಲ್ ರಿಪಬ್ಲಿಕನ್ ಪಾರ್ಟಿ, ಯೂನೈಟೆಡ್ ಇಂಡಿಯಾ ಪೀಪಲ್ಸ್ ಪಾರ್ಟಿ ಎಂಬ ಪಕ್ಷಗಳು ಹೆಸರು ನೋಂದಾಯಿಸಿವೆ.
ಆರ್‍ಎಂಪಿ, ಎಸ್‍ಯುಸಿಐ, ಕೇರಳ ಕಾಂಗ್ರೆಸ್ (ಎನ್), ಎನ್‍ಡಿಪಿಐ, ಐಎನ್‍ಎಲ್ ಎಂಬ ಪಕ್ಷಗಳು ಚುನಾವಣಾ ಆಯೋಗದ ಯಾದಿಯಲ್ಲಿ ಇನ್ನೂ ಸ್ಥಾನ ಹಿಡಿದಿಲ್ಲ. 1957ರಲ್ಲಿ ಕೇರಳ ವಿಧಾನ ಸಭೆಗೆ ನಡೆದ ಮೊದಲ ಚುನಾವಣಾ ವೇಳೆ ಸಿಪಿಐ, ಇಂಡಿಯನ್ ನ್ಯಾಶನಲ್ ಕಾಂಗ್ರೆಸ್, ಪಿಎಸ್‍ಪಿ ಮತ್ತು ಮುಸ್ಲಿಂ ಲೀಗ್ ಎಂಬ ರಾಜಕೀಯ ಪಕ್ಷಗಳು ಮಾತ್ರವೇ ಇದ್ದವು.
ಕೇರಳ ರಾಜ್ಯ ರೂಪೀಕರಣ ಬಳಿಕ ಕೇರಳ ರಾಜಕೀಯ ರಂಗದಲ್ಲಿ ತಲೆಯೆತ್ತ ತೊಡಗಿದ ಪ್ರಾದೇಶಿಕ, ಮತೀಯ, ಭಾಷಾವಾರು ಮತ್ತು ಪಕ್ಷಗಳು ವಿಭಜನೆಗೊಂಡು, ಹೊಸ ಪಕ್ಷಗಳು ರೂಪುಗೊಳ್ಳುತ್ತಿರುವುದೇ ಕೇರಳದಲ್ಲಿ ಹೊಸ ರಾಜಕೀಯ ಪಕ್ಷಗಳ ನಿರಂತರ ಹುಟ್ಟಿಗೆ ಕಾರಣವಾಗಿ ನಿಂತಿದೆ. ಕನಿಷ್ಠ ಸ್ಥಳೀಯಾಡಳಿತ ಸಂಸ್ಥೆಗಳಲ್ಲೂ ಪ್ರಾತಿನಿಧ್ಯ ಹೊಂದದ ಹಲವು ರಾಜಕೀಯ ಪಕ್ಷಗಳು ಕೇರಳದಲ್ಲಿವೆ.